ಮಣಿಪುರ, ಕಾಬೂಲ್:ಭೀಕರ ಭೂಕಂಪನಕ್ಕೆ ಸಿಲುಕಿರುವ ಟರ್ಕಿ ಮತ್ತು ಸಿರಿಯಾದಲ್ಲಿ 45 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಭಾನುವಾರ ಮತ್ತೊಮ್ಮೆ ಅಲ್ಲಿ 5.6 ತೀವ್ರತೆಯ ಭೂಕಂಪನ ಸಂಭವಿಸಿ ಮತ್ತೊಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಅಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ನಡುವೆಭಾರತದ ಮಣಿಪುರ, ಅಪ್ಘಾನಿಸ್ತಾನ ಮತ್ತು ತಜಕಿಸ್ತಾನದಲ್ಲಿ ಇಂದು ನಸುಕಿನ ಜಾವವೇ ಭೂಮಿ ನಡುಗಿದೆ. 3.1 ರಿಂದ 4.3 ಪ್ರಮಾಣದಲ್ಲಿ ಭೂಕಂಪನ ಉಂಟಾಗಿದೆ. ಈವರೆಗೂ ಯಾವುದೇ ಸಾವು ನೋವಿನ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಮಂಗಳವಾರ ಮುಂಜಾನೆ ಮಣಿಪುರದ ನೋನಿ ಜಿಲ್ಲೆಯಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿದೆ. ನಸುಕಿನ ಜಾವ 2.46 ರ ಸುಮಾರಿಗೆ 25 ಕಿ.ಮೀ ಆಳದಲ್ಲಿ ಭೂಕಂಪ ಅಲೆಗಳು ಎದ್ದಿವೆ. ಇದು 93 ಕಿಮೀ ವ್ಯಾಪ್ತಿಯಲ್ಲಿ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ.
ಫೆಬ್ರವರಿ 19 ರಂದು ಆಂಧ್ರಪ್ರದೇಶದ ಎನ್ಟಿಆರ್ ಜಿಲ್ಲೆಯ ನಂದಿಗಾಮ ಪಟ್ಟಣದಲ್ಲಿ ಭೂಕಂಪ ಸಂಭವಿಸಿತ್ತು. ಯಾವುದೇ ಪ್ರಾಣ ಹಾನಿ ವರದಿಯಾಗಿಲ್ಲ. ಭಾನುವಾರ ಬೆಳಗ್ಗೆ 7.13ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, 3.4 ಸೆಕೆಂಡ್ಗಳ ಕಾಲ ಭೂಕಂಪನ ಸಂಭವಿಸಿದೆ. ಭಯಭೀತರಾದ ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದರು. ಅದೇ ದಿನ ಮಧ್ಯಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿರುವುದು ದಾಖಲಾಗಿದೆ.
ಭೂಕಂಪವು ಇಂದೋರ್‌ನಿಂದ ಸುಮಾರು 151 ಕಿ. ಮೀ. ನೈಋತ್ಯಕ್ಕೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಧಾರ್‌ಗೆ ಅಪ್ಪಳಿಸಿತು. ಭೂಕಂಪದ ಕೇಂದ್ರಬಿಂದುವು ಭೂಮಿಯ ಮೇಲ್ಮೈಯಿಂದ 10 ಕಿಮೀ ಆಳದಲ್ಲಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರದ ತಿಳಿಸಿದೆ.