ನವದೆಹಲಿ: ಮೇಘಾಲಯದ ಪಶ್ಚಿಮ ಖಾಸಿ ಬೆಟ್ಟಗಳಲ್ಲಿ ಇಂದು ಬೆಳಗ್ಗೆ 7:47 ರ ಸುಮಾರಿಗೆ ಭೂಮಿ ಕಂಪಿಸಿದೆ. ಸುಮಾರು 90.94 ಕಿಲೋ ಮೀಟರ್ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದ್ದು, 5 ಕಿ.ಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ.3.5 ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್ ಮೂಲಕ ತಿಳಿಸಿದೆ.
ಭಾನುವಾರ ಮುಂಜಾನೆ ಸಹ ಮೇಘಾಲಯದ ದಕ್ಷಿಣ ಗಾರೋ ಬೆಟ್ಟಗಳಲ್ಲಿ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ ತೀವ್ರತೆ 3.5 ದಾಖಲಾಗಿದೆ ಎಂದು ಎನ್ಸಿಎಸ್ ಮಾಹಿತಿ ನೀಡಿತ್ತು. ಈ ಬೆನ್ನಲ್ಲೇ ಇದೀಗ ಮತ್ತೆ ಭೂಮಿ ಕಂಪಿಸಿದ್ದು, ಆತಂಕ ಎದುರಾಗಿದೆ.
ಇಂದು ಬೆಳಗ್ಗೆ ಪೆಸಿಫಿಕ್ ಮಹಾಸಾಗರದಲ್ಲಿ ಸೋಮವಾರ 7.1 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಸುನಾಮಿ ಸೃಷ್ಟಿಯಾಗಿಲ್ಲ. ನ್ಯೂಜಿಲ್ಯಾಂಡ್ ಉತ್ತರ ದ್ವೀಪದ ಈಶಾನ್ಯಕ್ಕೆ ಸುಮಾರು 900 ಕಿಲೋಮೀಟರ್ ( 560 ಮೈಲುಗಳು ) ದೂರದ ಕೆರ್ಮಾಡೆಕ್ ದ್ವೀಪಗಳ ಬಳಿ 49 ಕಿಲೋಮೀಟರ್ ( 30 ಮೈಲುಗಳು ) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಮಾಹಿತಿ ನೀಡಿದೆ.
ಭೂಕಂಪವು ಹವಾಯಿ ಮತ್ತು ವಿಶಾಲವಾದ ಪೆಸಿಫಿಕ್‌ಗೆ ಯಾವುದೇ ಅಪಾಯವನ್ನುಂಟು ಮಾಡಿಲ್ಲ, ಸುನಾಮಿ ಯಾವುದೇ ಪ್ರಾಣ ಹಾನಿ ಮಾಡದೇ ಹಾದು ಹೋಗಿದೆ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ. ಇನ್ನೊಂದೆಡೆ, ಭೂಕಂಪವು ನ್ಯೂಜಿಲ್ಯಾಂಡ್ನ ಮೇಲೆ ಪರಿಣಾಮ ಬೀರಬಹುದೇ ಎಂದು ನ್ಯೂಜಿಲ್ಯಾಂಡ್ನ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆಯು ಅಂದಾಜಿಸುತ್ತಿದೆ. ಅದಾಗಿಯೂ, ಪ್ರಬಲ ಭೂಕಂಪ ಸಂಭವಿಸಿರುವುದರಿಂದ ಕರಾವಳಿ ಪ್ರದೇಶಗಳಲ್ಲಿರುವ ಜನರು ಅಲ್ಲಿಂದ ತೆರಳುವಂತೆ ಸಲಹೆ ನೀಡಿದ್ದಾರೆ. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿರುವ ಕುರಿತು ವರದಿಯಾಗಿಲ್ಲ.