ನವದೆಹಲಿ :ಇಂದು ವಿಶ್ವ ಭೂಮಿ ದಿನ. ಇದನ್ನು 'ಅಂತಾರಾಷ್ಟ್ರೀಯ ಮಾತೃಭೂಮಿ ದಿನ' ಎಂದೂ ಕರೆಯುತ್ತಾರೆ. ಪ್ರತಿ ವರ್ಷ ಏ. 22ರಂದು ಆಚರಿಸಲಾಗುತ್ತದೆ. ನಮ್ಮ ಪರಿಸರವನ್ನು ರಕ್ಷಿಸುವ ತೀವ್ರ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತ ಹಲವು ದೇಶಗಳು ಈ ದಿನವನ್ನು ಆಚರಿಸುತ್ತವೆ. ಮಾಲಿನ್ಯ, ಅರಣ್ಯನಾಶ ಮತ್ತು ಜಾಗತಿಕ ತಾಪಮಾನ ಸೇರಿದಂತೆ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನ ಹೊಂದಿದೆ.
ಭೂಮಿಯ ದಿನ 2022 ಥೀಮ್ :ಅರ್ಥ್ ಡೇ ಸಂಸ್ಥೆಯ ಪ್ರಕಾರ, 2022ರ ಭೂ ದಿನದ ಥೀಮ್'ನಮ್ಮ ಗ್ರಹದಲ್ಲಿ (ಭೂಮಿ) ಹೂಡಿಕೆ ಮಾಡಿ'. ಇದರ ಪ್ರಮುಖ ಅಂಶವೆಂದರೆ ದಿಟ್ಟ ರೀತಿಯಲ್ಲಿ ಕಾರ್ಯನಿರ್ವಹಿಸುವುದು ಮತ್ತು ಸಮಾನ ರೀತಿಯಲ್ಲಿ ಅದನ್ನು ಕಾರ್ಯಗತಗೊಳಿಸುವುದಾಗಿದೆ. ಭೂಮಿಗೆ ಅಥವಾ ಪರಿಸರಕ್ಕೆ ಹಾನಿಕಾರಕ ಕಾರ್ಯಗಳಿಂದ ದೂರವಿರುವ ನಿಮ್ಮ ಚಿಂತನೆಯನ್ನು ದಿಟ್ಟಗೊಳಿಸಿ ಮತ್ತು ಅದನ್ನು ಎಲ್ಲೆಡೆ ಪಸರಿಸುವುದಾಗಿದೆ. 'ನಮ್ಮ ಭೂಮಿಯನ್ನು ಮರುಸ್ಥಾಪಿಸಿ' ಎಂಬುದು 2021ರ ಥೀಮ್ ಆಗಿತ್ತು.
ವಿಶ್ವ ಭೂಮಿ ದಿನದ ಇತಿಹಾಸ :ಏ.22, 1970ರಂದು ಭೂಮಿ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು. 150 ವರ್ಷಗಳ ಕೈಗಾರಿಕಾ ಅಭಿವೃದ್ಧಿಯ ಪರಿಣಾಮಗಳ ವಿರುದ್ಧ ಪ್ರತಿಭಟಿಸಲು 20 ಮಿಲಿಯನ್ ಜನರು ನಗರಗಳಾದ್ಯಂತ ಬೀದಿಗಿಳಿದರು. ಸ್ಯಾನ್ ಫ್ರಾನ್ಸಿಸ್ಕೋದ ಯುನೆಸ್ಕೊ ಸಮ್ಮೇಳನದಲ್ಲಿ ಶಾಂತಿ ಹೋರಾಟಗಾರ ಜಾನ್ ಮೆಕ್ ಕಾನ್ನೆಲ್ ಮಾತೃ ಭೂಮಿ ಮತ್ತು ಶಾಂತಿಯ ಪರಿಕಲ್ಪನೆಯನ್ನು ಗೌರವಿಸಲು ಒಂದು ದಿನ ಬೇಕೆಂದು ಪ್ರಸ್ತಾಪಿಸಿದ್ದರು.
ಬಳಿಕ ಮಾ. 21, 1970ರಂದು ಉತ್ತರ ಗೋಳಾರ್ಧದಲ್ಲಿ ವಿಶ್ವ ಭೂ ದಿನವನ್ನು ವಸಂತ ದಿನವಾಗಿ ಆಚರಿಸಲು ನಿರ್ಧರಿಸಲಾಗಿತ್ತು. ಆ ನಂತರ, ಅಮೆರಿಕದ ಸೆನೆಟ್ ಸದಸ್ಯ ಗೇಲಾರ್ಡ್ ನೆಲ್ಸನ್ ಅವರು ಏ.22, 1970 ರಂದು ರಾಷ್ಟ್ರವ್ಯಾಪಿ ಪರಿಸರ ಜ್ಞಾನೋದಯ ದಿನವನ್ನು ಆಚರಿಸಲು ಪ್ರಸ್ತಾವನೆ ಇಟ್ಟಿದ್ದರು. ನಂತರ ಅದನ್ನು 'ಅರ್ಥ್ ಡೇ' ಎಂದು ಮರುನಾಮಕರಣ ಮಾಡಲಾಯಿತು.