ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟ ಎರಡು ತಿಂಗಳ ಬಳಿಕ ಇದೀಗ ಪರಿಸ್ಥಿತಿ ಸುಧಾರಿಸಿಕೊಳ್ಳುತ್ತಿದ್ದು, ಕೆನಡಾ ಪ್ರಜೆಗಳಿಗೆ ಎಲೆಕ್ಟ್ರಾನಿಕ್ ವೀಸಾ ಸೇವೆಯನ್ನು ಕೇಂದ್ರ ಸರ್ಕಾರ ಪುನರಾರಂಭಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ವರ್ಚುವಲ್ ಜಿ20 ನಾಯಕರ ಶೃಂಗಸಭೆ ಮುಕ್ತಾಯದ ನಂತರ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಜೈಶಂಕರ್, ಇದಕ್ಕೂ ಮುನ್ನ ಕೆನಡಾದಲ್ಲಿನ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ರಾಜತಾಂತ್ರಿಕರಿಗೆ ಅಗತ್ಯವಾದ ಕೆಲಸವನ್ನು ಮಾಡಲು ಕಷ್ಟಕರವಾದ ಹಿನ್ನೆಲೆಯಲ್ಲಿ ನಾವು ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೆವು. ಆದರೆ, ಸದ್ಯದ ಪರಿಸ್ಥಿತಿ ಉತ್ತಮವಾಗಿದೆ. ವೀಸಾ ಸೇವೆಗಳನ್ನು ಕ್ರಮೇಣ ಮರುಪ್ರಾರಂಭಿಸಲು ಸಾಧ್ಯವಿದೆ ಎಂದು ನಾವು ಕಂಡುಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಅನೇಕ ವಿಭಾಗಗಳಲ್ಲಿ ಭೌತಿಕ ವೀಸಾ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.
"ಅರ್ಹ ಕೆನಡಾ ನಾಗರಿಕರಿಗೆ ಭಾರತವು ಎಲೆಕ್ಟ್ರಾನಿಕ್ ವೀಸಾ ಸೇವೆಗಳನ್ನು ಮತ್ತೆ ಆರಂಭಿಸಿದೆ ಎಂದು ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ಬುಧವಾರ ಪ್ರಕಟಿಸಿದೆ. ಈ ಕುರಿತು ಅಧಿಸೂಚನೆ ಹೊರಡಿಸಿರುವ ಭಾರತೀಯ ಹೈಕಮಿಷನ್, "ನಿಯಮಿತ/ಸಾಮಾನ್ಯ ಕೆನಡಾದ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಎಲ್ಲಾ ಅರ್ಹ ಕೆನಡಾದ ನಾಗರಿಕರಿಗೆ ನವೆಂಬರ್ 22, 2023ರಿಂದ ಜಾರಿಗೆ ಬರುವಂತೆ ಭಾರತೀಯ ಇ-ವಿಸಾ ಸೌಲಭ್ಯವನ್ನು ಮರುಸ್ಥಾಪಿಸಲಾಗಿದೆ" ಎಂದು ಹೇಳಿದೆ.
ಇದನ್ನೂ ಓದಿ:Explained: 'ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ' : ಕೆನಡಾದ ರಾಜತಾಂತ್ರಿಕರನ್ನು ಹೊರಗಿಡಲು ಭಾರತ ಬಯಸಿದ್ದೇಕೆ?