ಜೆಡ್ಡಾ:ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಲಿಖಿತ ಸಂದೇಶವನ್ನು ಅವರಿಗೆ ನೀಡಿದ್ದಾರೆ. ದ್ವಿಪಕ್ಷೀಯ ಬಾಂಧವ್ಯದಲ್ಲಾಗುತ್ತಿರುವ ಪ್ರಗತಿಯ ಹಿನ್ನೆಲೆಯಲ್ಲಿ ಕ್ರೌನ್ ಪ್ರಿನ್ಸ್ ಅವರಿಗೆ ಅಭಿನಂದನೆ ತಿಳಿಸಿದರು.
ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಲು ಜೈಶಂಕರ್ ಅವರು ಮೂರು ದಿನಗಳ ಭೇಟಿಗಾಗಿ ಶನಿವಾರ ಸೌದಿ ಅರೇಬಿಯಾಕ್ಕೆ ಆಗಮಿಸಿದ್ದಾರೆ. ವಿದೇಶಾಂಗ ಸಚಿವರಾಗಿ ಸೌದಿ ಅರೇಬಿಯಾಕ್ಕೆ ಇದು ಅವರ ಮೊದಲ ಭೇಟಿಯಾಗಿದೆ. ಅವರು ಭಾನುವಾರ ಜೆಡ್ಡಾದಲ್ಲಿ ಸೌದಿ ಕ್ರೌನ್ ಪ್ರಿನ್ಸ್ ಅವರನ್ನು ಭೇಟಿಯಾದರು.
ಕ್ರೌನ್ ಪ್ರಿನ್ಸ್ ಮತ್ತು ಉಪಪ್ರಧಾನಿ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರು ಪ್ರಧಾನಿ ಮೋದಿ ಕಳುಹಿಸಿರುವ ಲಿಖಿತ ಸಂದೇಶವನ್ನು ಸ್ವೀಕರಿಸಿದ್ದಾರೆ ಎಂದು ಸೌದಿ ಅಧಿಕೃತ ಪ್ರೆಸ್ ಏಜೆನ್ಸಿ ವರದಿ ಮಾಡಿದೆ. ಜೆಡ್ಡಾದಲ್ಲಿರುವ ಕ್ರೌನ್ ಪ್ರಿನ್ಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಭೇಟಿ ಮಾಡುವ ಮೂಲಕ ಲಿಖಿತ ಸಂದೇಶವನ್ನು ಕ್ರೌನ್ ಪ್ರಿನ್ಸ್ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಅದು ಹೇಳಿದೆ.
ಸಭೆಯಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತು ಅವುಗಳನ್ನು ವೃದ್ಧಿಸುವ ಅವಕಾಶಗಳ ಬಗ್ಗೆ ಪರಿಶೀಲಿಸಲಾಯಿತು ಮತ್ತು ಇತ್ತೀಚಿನ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು ಎಂದು ತಿಳಿಸಲಾಗಿದೆ.