ನವದೆಹಲಿ:ಕೋವ್ಯಾಕ್ಸಿನ್, ಕೋವಿಶೀಲ್ಡ್ ಕೋವಿಡ್ ಲಸಿಕೆಗಳು ಶೀಘ್ರದಲ್ಲೇ ಭಾರತದ ಔಷಧ ನಿಯಂತ್ರಣ ಪ್ರಾಧಿಕಾರದಿಂದ ಮಾರುಕಟ್ಟೆಗೋಸ್ಕರ ಅನುಮೋದನೆ ಪಡೆದುಕೊಳ್ಳುವ ಸಾಧ್ಯತೆ ಇದ್ದು, ಪ್ರತಿ ಡೋಸ್ಗೆ 275ರೂ. ಜೊತೆಗೆ ಹೆಚ್ಚುವರಿ ಸೇವಾ ಶುಲ್ಕವಾಗಿ 150 ರೂ. ನಿಗದಿ ಮಾಡುವ ಸಾಧ್ಯತೆ ಇದೆ.
ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ ಪ್ರತಿ ಡೋಸ್ಗೆ 1,200 ಮತ್ತು ಕೋವಿಶೀಲ್ಡ್ ಪ್ರತಿ ಡೋಸ್ಗೆ 780 ರೂ. ಇದೆ. ಇದು ಸೇವಾ ಶುಲ್ಕ ಸಹ ಒಳಗೊಂಡಿದೆ. ಇದೀಗ ಖಾಸಗಿ ಅಸ್ಪತ್ರೆಗಳಲ್ಲೂ ಲಸಿಕೆಗಳು ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ಭಾರತದಲ್ಲಿ ಲಭ್ಯವಾಗುತ್ತಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಉಚಿತವಾಗಿ ನೀಡಲಾಗ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಇವುಗಳಿಗೆ ದರ ನಿಗದಿ ಮಾಡಲಾಗಿದೆ. ಇದೀಗ ಈ ಬೆಲೆಯಲ್ಲಿ ಮತ್ತಷ್ಟು ಕಡಿತಗೊಳಿಸುವ ಸಾಧ್ಯತೆ ದಟ್ಟವಾಗಿದೆ.