ಚೆಂಗಲ್ಪಟ್ಟು(ತಮಿಳುನಾಡು):ವೈದ್ಯೋ ನಾರಾಯಣೋ ಹರಿಃ ಎಂಬ ಗಾದೆ ಮಾತಿದೆ. ಆದರೆ, ಕೆಲವು ಸಂದರ್ಭಗಳಲ್ಲಿ ವೈದ್ಯರು, ನರ್ಸ್ ತೆಗೆದುಕೊಳ್ಳುವ ದುಡುಕಿನ ನಿರ್ಧಾರಗಳು ರೋಗಿಗಳ ಪ್ರಾಣಕ್ಕೆ ಕುತ್ತು ತರುತ್ತವೆ. ಅಂಥದ್ದೇ ಒಂದು ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಎಂಬಲ್ಲಿ ನಡೆದಿದೆ. ಕಾರ್ಯನಿರತ ವೈದ್ಯರೊಬ್ಬರು 33 ವರ್ಷದ ಗರ್ಭಿಣಿಗೆ ವಿಡಿಯೋ ಕರೆ ಮೂಲಕ ಹೆರಿಗೆ ಮಾಡುವ ಕೆಲಸಕ್ಕೆ ಕೈಹಾಕಿದ್ದು, ಮಗು ಸಾವನ್ನಪ್ಪಿದೆ.
ಘಟನೆಯ ಸಂಪೂರ್ಣ ವಿವರ:ಇಲ್ಲಿನ ಸುಣಂಬೇಡಿನ ಪುಷ್ಪಾ(33) ಗರ್ಭಿಣಿಯಾಗಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನಿತ್ಯ ತಪಾಸಣೆಗೆ ಒಳಗಾಗುತ್ತಿದ್ದರು. ಸೋಮವಾರ ಮಗುವಿಗೆ ಜನ್ಮ ನೀಡಬೇಕಾಗಿತ್ತು. ಹೀಗಾಗಿ, ಪತಿ ಜೊತೆ ಆಸ್ಪತ್ರೆಗೆ ತೆರಳಿದ್ದರು. ತಪಾಸಣೆ ನಡೆಸಿರುವ ವೈದ್ಯರು ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಆಸ್ಪತ್ರೆಗೆ ಬರುವಂತೆ ಸೂಚಿಸಿದ್ದಾರೆ.
ಗರ್ಭಿಣಿ ಜೊತೆ ಹುಚ್ಚಾಟ ಮೆರೆದ ವೈದ್ಯ, ನರ್ಸ್ ಇದನ್ನೂ ಓದಿ:ಸಾಲ ವಸೂಲಾತಿ ವೇಳೆ ಗರ್ಭಿಣಿ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಂದ ಅಧಿಕಾರಿಗಳು
ಮಧ್ಯಾಹ್ನದ ಹೊತ್ತಿಗೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ, ವಾಪಸ್ ಸುಣಂಬೇಡಿ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ್ದಾರೆ. ಆಸ್ಪತ್ರೆಯಲ್ಲಿ ಡ್ಯೂಟಿ ಡಾಕ್ಟರ್ ಇರಲಿಲ್ಲ. ಈ ಮಧ್ಯೆಯೂ ಸ್ಕ್ಯಾನ್ ಮಾಡಲಾಗಿದ್ದು, ಗರ್ಭದಲ್ಲಿ ಮಗು ತಲೆಕೆಳಗಾಗಿರುವುದು ಗೊತ್ತಾಗಿದೆ. ಇದನ್ನು ಗಮನಕ್ಕೆ ತೆಗೆದುಕೊಳ್ಳದ ನರ್ಸ್ಗಳು ತಾವಾಗಿಯೇ ಹೆರಿಗೆ ಮಾಡಲು ಮುಂದಾಗಿದ್ದಾರೆ.
ಸಂಜೆ 6 ಗಂಟೆಯ ಸುಮಾರಿಗೆ ಮಗು ತಲೆಕೆಳಗಾಗಿ ಗರ್ಭದಿಂದ ಕಾಲುಗಳು ಹೊರಬರಲು ಶುರುವಾಗಿವೆ. ಇದರಿಂದ ಗಾಬರಿಗೊಂಡಿರುವ ನರ್ಸ್ ತಕ್ಷಣವೇ ವೈದ್ಯರಿಗೆ ವಿಡಿಯೋ ಕರೆ ಮಾಡಿದ್ದಾರೆ. ವೈದ್ಯರು ತಕ್ಷಣ ಸ್ಥಳಕ್ಕಾಗಮಿಸಲು ಸಾಧ್ಯವಾಗದೇ ಫೋನ್ ಮೂಲಕವೇ ಸಲಹೆ ನೀಡಿದ್ದಾರೆ. ಆದರೆ, ಅದು ವಿಫಲವಾಗಿದೆ. ಗರ್ಭಿಣಿಯ ಸ್ಥಿತಿ ಗಂಭೀರವಾಗ್ತಿದ್ದಂತೆ ಆ್ಯಂಬುಲೆನ್ಸ್ನಲ್ಲಿ ಮಧುರಾಂತಗಮ್ ಜಿಎಚ್ಗೆ ಕಳುಹಿಸಿದ್ದಾರೆ. ಆದರೆ, ಮಾರ್ಗಮಧ್ಯೆ ಮಗು ಗರ್ಭದಿಂದ ಹೊರ ಬಂದಿದ್ದು, ಸಾವನ್ನಪ್ಪಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಮಹಿಳೆಗೆ ಚಿಕಿತ್ಸೆ ಮುಂದುವರೆದಿದೆ.
ಘಟನೆ ಗೊತ್ತಾಗುತ್ತಿದ್ದಂತೆ ಸುಣಂಬೇಡ ಗ್ರಾಮಸ್ಥರು ಆಸ್ಪತ್ರೆ ಎದುರು ಜಮಾಯಿಸಿ ವೈದ್ಯ ಹಾಗೂ ನರ್ಸ್ಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.