ಜಲ್ಪೈಗುರಿ(ಪಶ್ಚಿಮಬಂಗಾಳ):ವಿಜಯದಶಮಿ ಆಚರಣೆ ಬಳಿಕ ದುರ್ಗಾ ಮೂರ್ತಿ ನಿಮಜ್ಜನ ವೇಳೆ ನದಿ ಪ್ರವಾಹ ಉಂಟಾಗಿ 7 ಜನರು ಕೊಚ್ಚಿಹೋಗಿ, ಹಲವರು ನಾಪತ್ತೆಯಾದ ಘಟನೆ ಪಶ್ಚಿಮಬಂಗಾಳದಲ್ಲಿ ಬುಧವಾರ ರಾತ್ರಿ ನಡೆದಿದೆ.
ದುರ್ಗಾ ಮೂರ್ತಿ ನಿಮಜ್ಜನ ವೇಳೆ ಸ್ಥಳದಲ್ಲಿಯೇ ಎನ್ಡಿಆರ್ಎಫ್ ತಂಡ ಹಾಜರಿದ್ದ ಕಾರಣ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ ನದಿ ಗಡ್ಡೆಯಲ್ಲಿ ಸಿಲುಕಿದ್ದ 40 ಜನರನ್ನು ರಕ್ಷಿಸಲಾಗಿದೆ.
ಜಲ್ಪೈಗುರಿ ಎಂಬಲ್ಲಿ ದೇವಿ ಮೂರ್ತಿ ನಿಮಜ್ಜನಕ್ಕಾಗಿ ಮಾಲ್ ನದಿಗೆ 50 ಕ್ಕೂ ಅಧಿಕ ಜನರು ತೆರಳಿದ್ದರು. ಈ ವೇಳೆ ಹಠಾತ್ ಪ್ರವಾಹ ಬಂದಿದೆ. ಸಂಭ್ರಮದಲ್ಲಿದ್ದ ಜನರು ಪ್ರವಾಹದಿಂದ ಗಲಿಬಿಲಿಗೊಂಡಿದ್ದಾರೆ. ನೋಡನೋಡುತ್ತಿದ್ದಂತೆ ಹಲವರು ನೀರಿಗೆ ಕೊಚ್ಚಿಹೋದರು. ಇನ್ನೂ ಕೆಲವರು ನದಿಯಲ್ಲಿನ ಗಡ್ಡೆಯ ಮೇಲೆ ತೆರಳಿದರು. ನೀರು ಪೂರ್ಣವಾಗಿ ಗಡ್ಡೆಯನ್ನು ಆವರಿಸಿಕೊಂಡಿದೆ.
ಸ್ಥಳದಲ್ಲೇ ಇದ್ದ ಪೊಲೀಸರು ಮತ್ತು ಎನ್ಡಿಆರ್ಎಫ್ ಪಡೆ ತಕ್ಷಣವೇ ನದಿಗೆ ಜಿಗಿದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ನೀರಿನಲ್ಲಿ ಕೊಚ್ಚಿಹೋಗುತ್ತಿದ್ದವರನ್ನು ಹಗ್ಗದ ಸಹಾಯದಿಂದ ಬದುಕುಳಿಸಿದ್ದಾರೆ. ಅಲ್ಲದೇ, ನದಿಯಲ್ಲಿ ಸಿಲುಕಿದ್ದ 40 ಜನರನ್ನು ರಕ್ಷಿಸಿದ್ದಾರೆ.
ದುರ್ಗಾ ದೇವಿ ನಿಮಜ್ಜನ ವೇಳೆ ಹಠಾತ್ ಪ್ರವಾಹ
ಕೊಚ್ಚಿಹೋಗಿದ್ದ 7 ಜನರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಕಣ್ಮರೆಯಾದ ಇನ್ನಷ್ಟು ಜನರ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ:ಪಶ್ಚಿಮಬಂಗಾಳದಲ್ಲಿ ನಡೆದ ದುರಂತದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ದುರ್ಗಾದೇವಿ ಸಂಭ್ರಮಾಚರಣೆ ವೇಳೆ ದುರಂತ ನಡೆದಿರುವುದು ದುಖಃಕರ ಸಂಗತಿ. ಮಡಿದವರ ಕುಟುಂಬಕ್ಕೆ ನೆರವು ನೀಡಿ. ಅವರಿಗೆ ದುಃಖ ಭರಿಸುವ ಶಕ್ತಿ ದೇವಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.
ಓದಿ:ನಾಗರಹೊಳೆಯಲ್ಲಿ ಗಾಯಗೊಂಡ ಆನೆ ಮರಿ ಕಂಡ ರಾಹುಲ್: ಚಿಕಿತ್ಸೆ ಕೊಡಿಸುವಂತೆ ಸಿಎಂಗೆ ಪತ್ರ