ಚಂಡೀಗಢ:ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ ಮತ್ತು ಪಂಜಾಬ್‌ನಲ್ಲಿ ಕೋವಿಡ್ 2ನೇ ಅಲೆಯ ಆತಂಕದಿಂದಾಗಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಹೊಸ ನಿರ್ಬಂಧಗಳನ್ನು ವಿಧಿಸಲು ಆದೇಶಿಸಿದ್ದಾರೆ.
ಪಂಜಾಬ್ ರಾಜ್ಯದ ಎಲ್ಲ ಪಟ್ಟಣಗಳು ಮತ್ತು ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸುವುದರ ಜೊತೆಗೆ ಡಿಸೆಂಬರ್ 1 ರಿಂದ ಜಾರಿಗೆ ಬರುವಂತೆ ಮಾಸ್ಕ್ ಧರಿಸದಿರುವುದು ಅಥವಾ ಸಾಮಾಜಿಕ ಅಂತರ ಪಾಲಿಸದಿದ್ದಕ್ಕಾಗಿ ದಂಡದ ಮೊತ್ತವನ್ನು ದ್ವಿಗುಣಗೊಳಿಸಲು ಆದೇಶ ಹೊರಡಿಸಿದ್ದಾರೆ.
ಡಿಸೆಂಬರ್ 15ರ ನಂತರ ಪರಿಶೀಲಿಸಲಾಗುವ ನಿರ್ಬಂಧಗಳು, ಎಲ್ಲ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಮದುವೆ ಛತ್ರಗಳು ರಾತ್ರಿ 9.30ರ ವರೆಗೆ ಮಾತ್ರ ತೆರೆದಿರಬೇಕು ಎಂದು ತಿಳಿಸಲಾಗಿದೆ. ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಘೋಷಿಸಿದ್ದಾರೆ.
ಉನ್ನತ ಮಟ್ಟದ ರಾಜ್ಯ ಕೋವಿಡ್ ಪರಿಶೀಲನಾ ಸಭೆಯ ನಂತರ ಹೊಸ ನಿರ್ಬಂಧಗಳ ವಿವರಗಳನ್ನು ನೀಡಿದ ಅಧಿಕೃತ ವಕ್ತಾರರು, ಸೂಕ್ತ ನಿಯಮಗಳನ್ನು ಅನುಸರಿಸದಿದ್ದರೆ ಪ್ರಸ್ತುತ 500 ರೂ. ದಂಡ ವಿಧಿಸುತ್ತಿದ್ದು ಇದನ್ನು ಒಂದು ಸಾವಿರ ರೂ.ಗೆ ಹೆಚ್ಚಿಸಲಾಗುವುದು ಎಂದಿದ್ದಾರೆ.
ಚಿಕಿತ್ಸೆಗಾಗಿ ದೆಹಲಿಯಿಂದ ರೋಗಿಗಳ ಒಳಹರಿವು ಗಮನದಲ್ಲಿಟ್ಟುಕೊಂಡು, ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆಯನ್ನು ಪರಿಶೀಲಿಸಲು ಮತ್ತು ಉತ್ತಮಗೊಳಿಸಲು ನಿರ್ಧರಿಸಲಾಗಿದೆ. ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳ ಆರೈಕೆಗಾಗಿ ಹಾಸಿಗೆಗಳನ್ನು ಮೀಸಲಿಡಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಕೆಲಸ ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.