ನವದೆಹಲಿ:ತೀವ್ರ ಹಣಕಾಸು ಬಿಕ್ಕಟ್ಟಿನಿಂದಾಗಿ ದಿವಾಳಿಯಾಗಿರುವ ಗೋ ಫಸ್ಟ್ ಏರ್ಲೈನ್ಸ್ ತನ್ನ ವಿಮಾನಗಳ ಹಾರಾಟವನ್ನು ಮೇ 9 ರವರೆಗೂ ರದ್ದುಗೊಳಿಸಿದೆ. ಇದಕ್ಕೂ ಮೊದಲು ವಿಮಾನಯಾನ ಸಂಸ್ಥೆ ಮೇ 5 ರವರೆಗೂ ಹಾರಾಟ ನಡೆಸಲಾಗುವುದಿಲ್ಲ ಎಂದು ತಿಳಿಸಿತ್ತು. ಅಲ್ಲದೇ, ಶೀಘ್ರವೇ ಪ್ರಯಾಣಿಕರಿಗೆ ಟಿಕೆಟ್ನ ಸಂಪೂರ್ಣ ಹಣವನ್ನು ಪಾವತಿ ಮಾಡಲಾಗುವುದು ಎಂದು ತಿಳಿಸಿತ್ತು.
ವಿವಿಧ ಕಾರಣಗಳಿಗಾಗಿ ಮೇ 9 ರವರೆಗೆ ನಿಗದಿಪಡಿಸಲಾದ ಗೋ ಫಸ್ಟ್ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ" ಎಂದು ಭಾರತೀಯ ವಿಮಾನಯಾನ ಸಂಸ್ಥೆ ಗೋ ಫಸ್ಟ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಮೂಲ ಪಾವತಿ ವಿಧಾನದಲ್ಲೇ ಹಣವನ್ನು ಮರಳಿಸಲಾಗುವುದು ಎಂದು ಅದು ಹೇಳಿದೆ. ಅಲ್ಲದೇ, ಗ್ರಾಹಕರ ಪ್ರಯಾಣ ರದ್ದಾಗಿದ್ದಕ್ಕೆ ವಿಷಾದಿಸುತ್ತೇವೆ. ಅಗತ್ಯವಿರುವ ಎಲ್ಲ ನೆರವು ನೀಡಲು ಸಂಸ್ಥೆ ಪ್ರಯತ್ನಿಸಲಿದೆ ಎಂದು ತಿಳಿಸಿದೆ.
ಏರ್ಲೈನ್ಸ್ ಸಂಸ್ಥೆ, ದೆಹಲಿಯ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (ಎನ್‌ಸಿಎಲ್‌ಟಿ) ಮುಂದೆ ಸ್ವಯಂಪ್ರೇರಿತ ದಿವಾಳಿತನ ಪ್ರಕ್ರಿಯೆಗಳಿಗೆ ಅರ್ಜಿ ಸಲ್ಲಿಸಿದೆ. ಅಲ್ಲದೇ, ಮೇ 3 ರಿಂದ ಮೇ 5 ರವರೆಗೆ ತನ್ನ ವಿಮಾನ ಕಾರ್ಯಾಚರಣೆಗಳನ್ನು ರದ್ದುಗೊಳಿಸಲಾಗುವುದು ಎಂದು ಘೋಷಿಸಿತ್ತು. ಸಂಸ್ಥೆಯ ವಿಮಾನಗಳು ಮೇ 15 ರವರೆಗೂ ಕಾರ್ಯಾಚರಣೆ ಸ್ಥಗಿತಗೊಳಿಸಬಹುದು ಎಂದು ಕೆಲ ವರದಿಗಳು ಹೇಳಿವೆ.
ಗೋ ಫಸ್ಟ್ ಕಂಪನಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಲಿಮಿಟೆಡ್, ಬ್ಯಾಂಕ್ ಆಫ್ ಬರೋಡಾ ಲಿಮಿಟೆಡ್, ಐಡಿಬಿಐ ಬ್ಯಾಂಕ್ ಲಿಮಿಟೆಡ್, ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಮತ್ತು ಡಾಯ್ಚ ಬ್ಯಾಂಕ್ಗಳಲ್ಲಿ ಸಾಲವನ್ನು ಹೊಂದಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಸಾಲದ ಪ್ರಮಾಣ ಹೆಚ್ಚಾಗಿ ವಿಮಾನಗಳ ಕಾರ್ಯಾಚರಣೆಗೆ ಆರ್ಥಿಕ ತೊಡಕು ಉಂಟಾದ ಕಾರಣ ಹಾರಾಟ ನಿಲ್ಲಿಸಿದೆ.