ಚುರು(ರಾಜಸ್ಥಾನ್): ಈಗಿನ ಯುವಕರು, ಮಕ್ಕಳು ಮೊಬೈಲ್ ದಾಸರಾಗಿದ್ದಾರೆ ಎಂಬುದು ನಿಸ್ಸಂದೇಹ. ಊಟ, ನಿದ್ರೆಯನ್ನೂ ಮರೆತು ಮೊಬೈಲ್ ಬಳಸುತ್ತಾರೆ. ಈ ರೀತಿ ಅತಿಯಾದ ಮೊಬೈಲ್ ಬಳಕೆ ಮಾಡಿ ಯುವಕನೊಬ್ಬ ಮಾನಸಿಕ ರೋಗಕ್ಕೆ ತುತ್ತಾದ ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.
ಚುರು ಜಿಲ್ಲೆಯ ಅಕ್ರಮ್(20) ಎಂಬಾತ ಊಟ, ನಿದ್ರೆಯನ್ನೂ ಮಾಡದೇ ಅತಿಯಾದ ಮೊಬೈಲ್ ಗೀಳಿಗೆ ಒಳಗಾದವ. ಹುಚ್ಚನಂತೆ ವರ್ತಿಸುವ ಅಕ್ರಮ್ಗೆ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿವರ:
ಅಕ್ರಮ್ ಮೊಬೈಲ್ ಅತಿಯಾಗಿ ಬಳಸುವುದನ್ನು ರೂಢಿ ಮಾಡಿಕೊಂಡಿದ್ದಾನೆ. ಪ್ರತಿದಿನವೂ ರಾತ್ರಿಪೂರ್ತಿ ಮೊಬೈಲ್ ನೋಡುತ್ತಲೇ ಕಾಲ ಕಳೆದಿದ್ದಾನೆ. ಊಟ, ನಿದ್ರೆಯನ್ನು ತ್ಯಜಿಸಿದ್ದಾನೆ. ಇದು ಅವನ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಅಕ್ರಮ್ ಅವನ ಕುಟುಂಬಸ್ಥರನ್ನೇ ಗುರುತು ಹಿಡಿಯದಂತಾಗಿದ್ದಾನೆ.
ಇದನ್ನೂ ಓದಿ: ಲಾರಿಗೆ ಗುದ್ದಿದ ಶವಸಂಸ್ಕಾರಕ್ಕೆ ತೆರಳುತ್ತಿದ್ದ ವಾಹನ: ಪ.ಬಂಗಾಳದಲ್ಲಿ 18 ಮಂದಿ ದುರ್ಮರಣ
ಅಕ್ರಮ್ನ ವರ್ತನೆ ಕಂಡು ಗಾಬರಿಗೊಂಡ ಕುಟುಂಬಸ್ಥರು ಅವನನ್ನು ಮಾನಸಿಕ ವೈದ್ಯರೊಬ್ಬರ ಬಳಿ ಕರೆದುಕೊಂಡು ಹೋಗಿ ತೋರಿಸಿದ್ದಾರೆ. ಆತನ ಮೊಬೈಲ್ ಗೀಳು ಎಷ್ಟಿತ್ತು ಅಂದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯೂ ಮೊಬೈಲ್ ಬಳಸುತ್ತಿದ್ದ. ಇದನ್ನು ಕಂಡು ವೈದ್ಯರೇ ಅಚ್ಚರಿಗೊಂಡಿದ್ದಾರೆ.
ರಾತ್ರಿ ವೇಳೆ ನಿದ್ರೆ ಮಾಡದೇ ಮೊಬೈಲ್ ಬಳಸಿದ್ದರಿಂದ ಅಕ್ರಮ್ ಮಾನಸಿಕ ವ್ಯಾಧಿಗೆ ಗುರಿಯಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿರುವ ಅಕ್ರಮ್ಗೆ ಇದೀಗ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.