ಜಬಲ್ಪುರ (ಮಧ್ಯಪ್ರದೇಶ): ಇತ್ತೀಚೆಗೆ ವಿಮಾನದಲ್ಲಿ ಮೂತ್ರ ವಿಸರ್ಜನೆ ಮಾಡಿದಂತಹ ಕೆಲವು ಘಟನೆಗಳು ಬೆಳಕಿಗೆ ಬಂದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದವು. ಇದೀಗ ಎಕ್ಸ್‌ಪ್ರೆಸ್ ರೈಲಿನ ಎಸಿ ಬೋಗಿಯಲ್ಲಿ ಬರ್ತ್ (ಸೀಟ್) ಬಳಿಯೇ ರೈಲ್ವೆ ಉದ್ಯೋಗಿಯೊಬ್ಬ ಕುಡಿದ ಮತ್ತಿನಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಘಟನೆ ವರದಿಯಾಗಿದೆ. ಇದರಿಂದ ಮುಜುಗರ ಅನುಭವಿಸಿರುವ ರೈಲ್ವೆ ಅಧಿಕಾರಿಗಳು ಆರೋಪಿ ನೌಕರನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ದಶರತ್ ಕುಮಾರ್ ಎಂಬಾತನೇ ನಾಚಿಕಗೇಡಿನ ಕೃತ್ಯ ಎಸಗಿದ ನೌಕರ. ಜಬಲ್‌ಪುರದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್ಎಂ) ಕಚೇರಿಯ ಮೆಕ್ಯಾನಿಕಲ್ ವಿಭಾಗದಲ್ಲಿ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ತಮ್ಮ ಬಹುಕಾಲದ ಬೇಡಿಕೆಗಳು ಈಡೇರದಿರುವ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಲು ನವದೆಹಲಿಗೆ ತೆರಳುತ್ತಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ:ಮೂತ್ರ ವಿಸರ್ಜನೆಗೆಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹತ್ತಿ 6,000 ರೂಪಾಯಿ ಕಳೆದುಕೊಂಡ ವ್ಯಕ್ತಿ!
ತನ್ನ ಸಹೋದ್ಯೋಗಿಗಳೊಂದಿಗೆ ದಶರತ್ ಕುಮಾರ್ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನ ಬಿ6 ಎಸಿ (ಹವಾನಿಯಂತ್ರಿತ) ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಲಿಸುತ್ತಿದ್ದ ರೈಲಿನಲ್ಲೇ ಮದ್ಯ ಸೇವಿಸಿದ್ದಾರೆ. ಇದಾದ ಬಳಿಕ ಕುಡಿದ ಮತ್ತಿನಲ್ಲಿ ತಮ್ಮ ಬರ್ತ್ ಬಳಿಯೇ ದಶರತ್ ಮೂತ್ರ ವಿಸರ್ಜನೆ ಮಾಡಿದ್ದಾರೆ. ಈ ಘಟನೆಯನ್ನು ಯಾರೋ ಪ್ರಯಾಣಿಕರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಅಲ್ಲದೇ, ಈ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ಪ್ರಯಾಣಿಕರು ಅಪ್ಲೋಡ್ ಮಾಡಿದ್ದಾರೆ. ಇದು ಸಾಕಷ್ಟು ವೈರಲ್ ಆಗಿದೆ.
ಮತ್ತೊಂದೆಡೆ, ಈ ವೈರಲ್ ವಿಡಿಯೋ ಬಗ್ಗೆ ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದಾಗ, ಇದನ್ನು ಮುಚ್ಚಿಡಲು ಪ್ರಯತ್ನಿಸಿದ್ದರು. ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ಮುಂದೆ ಬಂದಿರಲಿಲ್ಲ. ಆದರೆ, ರೈಲ್ವೆ ನೌಕರನ ಕೃತ್ಯದ ಬಗ್ಗೆ ನೆಟ್ಟಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ''ಇದೇ ಕೃತ್ಯವನ್ನು ಯಾರೇ ಯಾವುದೇ ಪ್ರಯಾಣಿಕರು ಮಾಡಿದ್ದರೆ, ಇಷ್ಟೊತ್ತಿಗೆ ಆ ವ್ಯಕ್ತಿಯನ್ನು ರೈಲ್ವೆ ಅಧಿಕಾರಿಗಳು ಜೈಲಿಗೆ ಕಳುಹಿಸುತ್ತಿದ್ದರು'' ಎಂದೆಲ್ಲ ನೆಟ್ಟಿಗರು ಕಿಡಿಕಾರಲು ಶುರು ಮಾಡಿದ್ದಾರೆ. ಇದರಿಂದ ಎಚ್ಚೆತ್ತ ಅಧಿಕಾರಿಗಳು ಆರೋಪಿ ದಶರತ್ ಕುಮಾರ್ರನ್ನು ಅಮಾನತುಗೊಳಿಸಿದ್ದಾರೆ. ಜೊತೆಗೆ, ಶೋಕಾಸ್ ನೋಟಿಸ್ ಜಾರಿ ಮಾಡಿ ಉತ್ತರ ನೀಡುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ:ಏರ್ ಇಂಡಿಯಾದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ ಆರೋಪಿ ಬೆಂಗಳೂರಿನಲ್ಲಿ ಬಂಧನ
ಕಳೆದ ನವೆಂಬರ್ 26ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ಜೂನ್ ತಿಂಗಳಲ್ಲಿ ಆರೋಪಿ ಶಂಕರ್ ಮಿಶ್ರಾ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಈ ಕುಡಿದ ಮತ್ತಿನಲ್ಲಿ ಆರೋಪಿ ಕೃತ್ಯ ಎಸಗಿದ್ದ. ಈ ಘಟನೆ ವರದಿ ಬಳಿಕ ಏರ್ ಇಂಡಿಯಾ ಸಂಸ್ಥೆಗೆ 30 ಲಕ್ಷ ರೂ. ಹಣವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ಹಾಕಿತ್ತು. ಅಲ್ಲದೇ, ಪೈಲಟ್ ಲೈಸನ್ಸ್ ಅನ್ನು ಅಮಾನತುಗೊಳಿಸಲಾಗಿತ್ತು.