ಸೋನಭದ್ರ (ಉತ್ತರ ಪ್ರದೇಶ):ಮಧ್ಯಪ್ರದೇಶದ ಮೂತ್ರ ವಿಸರ್ಜನೆ ವಿವಾದ ಇತ್ಯರ್ಥವಾಗುವ ಮುನ್ನವೇ ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಇಂತಹದ್ದೇ ಮತ್ತೊಂದು ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ. ಜುಲೈ 11 ರಂದು ಈ ಘಟನೆ ನಡೆದಿದೆ. ಆದರೆ, ಘಟನೆಯ ವಿಡಿಯೋ ವೈರಲ್ ಆದ ನಂತರ ಪೊಲೀಸರಿಗೆ ದೂರು ನೀಡಲಾಗಿದೆ. ಮದ್ಯದ ಅಮಲಿನಲ್ಲಿ ದೂರುದಾರರಿಗೆ ಘಟನೆಯ ಬಗ್ಗೆ ತಿಳಿದಿರಲಿಲ್ಲ. ಮರುದಿನ ಬೆಳಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆದ ಮೇಲೆ, ಅದನ್ನು ನೋಡಿ ನಡೆದ ಘಟನೆಯ ಅರಿವಾಗಿದೆ. ನಂತರ ಸಂತ್ರಸ್ತ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ.
ಘಟನೆ ಹಿನ್ನೆಲೆ ಏನು?:ಆರೋಪಿ ಜವಾಹಿರ್ ಪಟೇಲ್ ಎಂಬಾತ ದೂರುದಾರ ಗುಲಾಬ್ ಕೋಲ್ ಗೆ ಪರಿಚಿತನಾಗಿದ್ದ. ಜುಲೈ 11 ರಂದು ಇಬ್ಬರೂ ಸೇರಿ ಮದ್ಯ ಸೇವಿಸಿದ್ದಾರೆ. ಮದ್ಯ ಸೇವಿಸಿದ ನಂತರ ಅವರ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಜಗಳ ಆರಂಭವಾಗಿದೆ. ಕೋಪದ ಭರದಲ್ಲಿ, ಜವಾಹಿರ್ ಪಟೇಲ್ ಸಂತ್ರಸ್ತ ಗುಲಾಬ್ ಕೋಲ್ ಅವರ ಕಿವಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಸಂತ್ರಸ್ತ ಕುಡಿದ್ದಿದ್ದರಿಂದ ಅಂದು ಏನಾಯಿತು, ಸಹವರ್ತಿ ಪಟೇಲ್ ಏನು ಮಾಡಿದ ಎಂಬ ಬಗ್ಗೆ ಗೊತ್ತಾಗಿಲ್ಲ. ಅಸಲಿಗೆ ಅಂದು ಏನು ನಡೆಯಿತು ಎಂಬುದು ಆ ದಿನ ಗುಲಾಬ್ಗೆ ತಿಳಿದಿರಲಿಲ್ಲ. ಗುರುವಾರ ಈ ಸಂಬಂಧದ ವಿಡಿಯೋವೊಂದು ವೈರಲ್ ಆದಾಗ ತನಗೆ ಏನಾಗಿದೆ ಎಂಬ ವಿಷಯ ಅರಿವಿಗೆ ಬಂದಿದೆ. ಆ ಬಳಿಕ ಗುಲಾಬ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾನೆ ಎಂದು ಎಂದು ಪೊಲೀಸ್ ಅಧಿಕಾರಿ ಪ್ರಕರಣದ ಮಾಹಿತಿ ನೀಡಿದ್ದಾರೆ.