ಅಂಬಾಲ :ಹರ್ಯಾಣದ ಅಂಬಾಲಾದ ದೆಹಲಿ-ಅಮೃತಸರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರೇಂಜ್ ರೋವರ್ನಲ್ಲಿ ಕುಡಿದ ಮತ್ತಿನಲ್ಲೇ ಸವಾರಿ ಮಾಡುತ್ತಿದ್ದ ಇಬ್ಬರು ಹುಡುಗಿಯರು ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದಲ್ಲಿ 39 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಈ ಅಪಘಾತದಲ್ಲಿ ಅವರ ಪತ್ನಿ ಮತ್ತು 8 ವರ್ಷದ ಮಗಳು ಗಂಭೀರವಾಗಿ ಗಾಯಗೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ 9 ತಿಂಗಳ ಮುಗ್ಧ ಮಗು ಬದುಕುಳಿದಿದೆ. ಅಪಘಾತವು ಎಷ್ಟು ಭೀಕರವಾಗಿತ್ತು ಎಂದರೆ ಡಿಕ್ಕಿ ಹೊಡೆದ ಕಾರು ಅರ್ಧಭಾಗ ಸಂಪೂರ್ಣ ನಜ್ಜಾಗಿದೆ.
ರಸ್ತೆ ಬದಿ ನಿಂತ ಕಾರಿಗೆ ಗುದ್ದಿದ ರೇಂಜ್ ರೋವರ್ನಲ್ಲಿದ್ದ ಅಮಲೇರಿಸಿಕೊಂಡಿದ್ದ ಯುವತಿಯರು.. ಅಪಘಾತ ಸಂಭವಿಸಿದ ಕೂಡಲೇ ಸ್ಥಳದಲ್ಲಿದ್ದವರು ಬಾಲಕಿಯರ ಕಾರನ್ನು ಸುತ್ತುವರಿದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜನರು ಕಾರಿನ ಸುತ್ತ ಸುತ್ತುವರೆದಿರುವುದನ್ನು ನೋಡಿದ ಇಬ್ಬರೂ ಹುಡುಗಿಯರು ಹೆದ್ದಾರಿಯಲ್ಲಿಯೇ ಸಾಕಷ್ಟು ಗಲಾಟೆಯನ್ನು ಸೃಷ್ಟಿಸಿದ್ದಾರೆ. ಮಹಿಳಾ ಪೊಲೀಸರ ಸಹಾಯದಿಂದ ಯುವತಿಯರನ್ನೂ ವೈದ್ಯಕೀಯ ಚಿಕಿತ್ಸೆಗಾಗಿ ಅಂಬಾಲಾದಲ್ಲಿರುವ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಅಪಘಾತದ ಬಳಿಕ ಮತ್ತಿನಲ್ಲಿದ್ದ ಹುಡುಗಿಯರಿಗೆ ಸ್ಥಳೀಯರು ಥಳಿಸಿದ್ದಾರೆ ಎಂದು ಮಹಿಳಾ ಪೊಲೀಸ್ ಸಿಬ್ಬಂದಿ ಹೇಳಿದ್ದಾರೆ. ವೈದ್ಯಕೀಯ ಚಿಕಿತ್ಸೆ ವೇಳೆ ಆಸ್ಪತ್ರೆಯಲ್ಲೂ ಸಹ ಯುವತಿಯರೂ ಸಾಕಷ್ಟು ದಾಂಧಲೆ ಮಾಡಿದರು. ಪೋಷಕರು ಮತ್ತು ವಕೀಲರು ಬರುವರೆಗೂ ಏನನ್ನೂ ಹೇಳುವುದಿಲ್ಲ ಎಂದು ಹುಡುಗಿಯರು ಹಠ ಹಿಡಿದ ಪ್ರಸಂಗವೂ ನಡೆಯಿತು.
ಓದಿ:ಬೈಕ್ ಸವಾರನ ಮೇಲೆ ಕಾರು ಹತ್ತಿಸಿದ ವೈದ್ಯೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ನಾನು ನನ್ನ ಕುಟುಂಬದೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದೇನೆ. ಇಂದು ನಾವು ದೆಹಲಿಯಿಂದ ಹಿಮಾಚಲದ ಪಾಲಂಪುರಕ್ಕೆ ಹೋಗುತ್ತಿದ್ದೆವು. ಹೆದ್ದಾರಿಯ ಮೊಹ್ರಾ ಧಾನ್ಯ ಮಾರುಕಟ್ಟೆ ಬಳಿ ಕಾರನ್ನು ಬದಿಗೆ ನಿಲ್ಲಿಸಿ ಕಬ್ಬಿನ ಜ್ಯೂಸ್ ಕುಡಿಯುತ್ತಿದ್ದೇವೆ. ಅಷ್ಟರಲ್ಲಿ ಹಿಂದಿನಿಂದ ವೇಗವಾಗಿ ಬಂದ ರೇಂಜ್ ರೋವರ್ ಕಾರು ನೇರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ನಮ್ಮ ಪತಿ ಮೋಹಿತ್ ಶರ್ಮಾ ಸಾವನ್ನಪ್ಪಿದ್ದು, ನನಗೆ ಮತ್ತು ನನ್ನ ಮಗಳು ಆರೋಹಿಗೆ ಗಾಯಗಳಾಗಿವೆ ಎಂದು ಗಾಯಗೊಂಡ ಮಹಿಳೆ ದೀಪ್ತಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಯುವತಿಯರಿಬ್ಬರೂ ಮದ್ಯ ಸೇವಿಸಿ ರೇಂಜ್ ರೋವರ್ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಇಬ್ಬರೂ ಹಿಮಾಚಲ ನಂಬರ್ ಪ್ಲೇಟ್ ಇರುವ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. 39 ವರ್ಷದ ಮೋಹಿತ್ ಶರ್ಮಾ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರ ಪತ್ನಿ ದೀಪ್ತಿ ಮತ್ತು 8 ವರ್ಷದ ಮಗಳು ಆರೋಹಿ ಗಾಯಗೊಂಡಿದ್ದಾರೆ. ಇಬ್ಬರೂ ಯುವತಿಯರು ಅಪಘಾತದ ಬಳಿಕ ಸ್ಥಳಕ್ಕಾಗಮಿಸಿದ ಎಸ್‌ಐ ಸುನೀಲ್ ಕುಮಾರ್ ಮೇಲೆ ಕೈ ಮಾಡಿದ್ದಾರೆ. ಈ ಬಗ್ಗೆ ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಸದ್ಯ ಇಬ್ಬರ ವಿಚಾರಣೆ ನಡೆಯುತ್ತಿದೆ ಎಂದು ಡಿಎಸ್‌ಪಿ ರಾಮ್ ಕುಮಾರ್ ತಿಳಿಸಿದ್ದಾರೆ.