ಅಗರ್ತಲಾ (ತ್ರಿಪುರಾ): ರಾಜ್ಯದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿದ್ದ 7,999 ಕೆ.ಜಿ (ಅಂದಾಜು 8 ಟನ್) ಗಾಂಜಾ ಮತ್ತು 4.2 ಕೋಟಿ ರೂಪಾಯಿ ಮೌಲ್ಯದ 49,860ಕ್ಕೂ ಹೆಚ್ಚು ವ್ಯಸನಕಾರಿ ಯಾಬಾ ಮಾತ್ರೆಗಳನ್ನು ಪೊಲೀಸರು ಶನಿವಾರ ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ. ಪಶ್ಚಿಮ ತ್ರಿಪುರಾದ ರಾಧಾಕಿಶೋರ್ ನಗರದಲ್ಲಿ ಐಜಿಪಿ ಆರ್.ಗೋಪಾಲ ಕೃಷ್ಣರಾವ್ ನೇತೃತ್ವದ ಉನ್ನತ ಮಟ್ಟದ ಡ್ರಗ್ ವಿಲೇವಾರಿ ಸಮಿತಿಯು ಇದನ್ನು ನಾಶಪಡಿಸಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಪೊಲೀಸರು ಅಪಾರ ಪ್ರಮಾಣದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ಒಂದು ವಾರದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ತ್ರಿಪುರಾ ಪೊಲೀಸರು ಸುಮಾರು 11 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದರು.
ಇದನ್ನೂ ಓದಿ:ಪ್ರತಿಷ್ಠಿತ ಕಾಲೇಜಿನ ಬಳಿ ಗಾಂಜಾ ಮಾರಾಟ: ಆನೇಕಲ್‌ನಲ್ಲಿ ಇಬ್ಬರ ಬಂಧನ
ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಡ್ರಗ್ಸ್ ಹಾವಳಿ ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರು. ಇದಾದ ನಂತರ ಅಧಿಕಾರಿಗಳು ಮಾದಕವಸ್ತು ಮಾರಾಟದ ವಿರುದ್ಧ ಸಮರ ಸಾರಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಈ ಬೆನ್ನಲ್ಲೆ 856 ಕಿ.ಮೀ ಅಂತರದ ತ್ರಿಪುರಾ ಮತ್ತು ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯಲ್ಲಿ ಅರೆ-ಮಿಲಿಟರಿ ಪಡೆಗಳು ಕಳ್ಳಸಾಗಣೆ ತಡೆಯಲು ಕ್ಷಿಪ್ರ ಕಾರ್ಯಾಚರಣೆ ಶುರು ಮಾಡಿವೆ ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.