ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಖಾನ್‌ನನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ ನಂತರ ತಮ್ಮ ಕುಟುಂಬಕ್ಕಾದ ಅನ್ಯಾಯದ ಕುರಿತು ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಅವರ ಪುತ್ರಿ ನಿಲೋಫರ್ ಮಲಿಕ್ ಖಾನ್ ಅವರು ಟ್ವಿಟ್ಟರ್‌ನಲ್ಲಿ ಭಾವನಾತ್ಮಕ ಪತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.
ಟ್ವಿಟರ್ನಲ್ಲಿ ಶೇರ್ ಮಾಡಿದ ಈ ಪತ್ರದಲ್ಲಿ, ನಿಲೋಫರ್ ಮಲಿಕ್ ಖಾನ್ ತನ್ನ ಪತಿ ಸಮೀರ್ ಖಾನ್ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕಾರಿಗಳು ಬಂಧಿಸಿದ ಭಯಾನಕ ರಾತ್ರಿಯನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ಅವರ ಕುಟುಂಬಸ್ಥರು ಈಗಲೂ ಅನುಭವಿಸುತ್ತಿರುವ ದುಃಖದ ಕುರಿತು ತಿಳಿಸಿದ್ದಾರೆ.
ಜನವರಿಯಲ್ಲಿ ಎನ್‌ಸಿಬಿಯವರು ಸಮೀರ್ ಖಾನ್‌ನನ್ನು ಬಂಧಿಸಿದರು. ಅನಂತರ ನಮ್ಮ ಮನೆಯಲ್ಲಿ ದುಃಖ ಮನೆಮಾಡಿದ್ದು, ಡ್ರಗ್ಸ್ ದಂಧೆಕೋರನ ಪತ್ನಿ ಎಂದು ಜನರು ನನ್ನನ್ನು ಮೂದಲಿಸುತ್ತಿದ್ದರು. ನನ್ನ ಮಕ್ಕಳ ಜೊತೆಯಿದ್ದ ಗೆಳೆಯರು ಸಹ ಸಂಬಂಧವನ್ನು ಕಡಿದುಕೊಂಡರು. ಎನ್‌ಸಿಬಿ ಅಧಿಕಾರಿಗಳಿಗೆ ಇದರಿಂದ ಏನೂ ಸಿಗಲಿಲ್ಲ, ಖಾನ್ ಎಂಟೂವರೆ ತಿಂಗಳು ಜೈಲಿನಲ್ಲಿ ಕಳೆಯಬೇಕಾಯಿತು ಎಂದು ಬೇಸರ ವ್ಯಕ್ತಪಡಿದ್ದಾರೆ.
ನನಗೆ ಮತ್ತು ನನ್ನ ಕುಟುಂಬಕ್ಕೆ ಇದು ಒತ್ತಡದ ಸಮಯವಾಗಿತ್ತು. ನಮಗೆ ಏನಾಯಿತು ಎಂಬುದನ್ನು ಪದಗಳಲ್ಲಿ ಹೇಳುವುದು ಕಷ್ಟ. ಅಪರಾಧಿಗಳಿಗೆ ಶಿಕ್ಷೆಯಾಗಬೇಕು, ನಿರಾಪರಾಧಿಗಳಿಗೆ ಅಲ್ಲ. ನಮಗೆ ಸಹಾಯ ಮಾಡುವಂತೆ ನಿಮ್ಮ ಬಳಿ ಮನವಿ ಮಾಡುತ್ತೇನೆ ಎಂದು ನಿಲೋಫರ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಪತ್ರವು ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ.
ಜನವರಿ 13 ರಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಸಮೀರ್ ಖಾನ್ ಬಂಧಿಸಿದ್ದಾರೆ. ಸಮೀರ್ ಡ್ರಗ್ಸ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದ್ದು, ಆದ್ದರಿಂದ ಅವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ 27 ಎ (ಅಕ್ರಮ ಸಂಚಾರಕ್ಕೆ ಹಣಕಾಸು ಒದಗಿಸುವುದು ಮತ್ತು ಅಪರಾಧಿಗಳಿಗೆ ಆಶ್ರಯ ನೀಡಿದ್ದಕ್ಕಾಗಿ ನೀಡುವ ಶಿಕ್ಷೆ) ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ.