ಕರ್ನಾಟಕ

karnataka

ETV Bharat / bharat

ಡ್ರಗ್ಸ್ ಜಾಲ ಭೇದಿಸಿದ ಹೈದರಾಬಾದ್ ಪೊಲೀಸ್​: 1,820 ಕೆಜಿ ಗಾಂಜಾ ವಶ - ಅಂತಾರಾಜ್ಯ ಮಾದಕವಸ್ತು ಕಳ್ಳಸಾಗಣೆ ದಂಧೆ

ಟ್ರಕ್​ನಲ್ಲಿ ಸಾವಯವ ಗೊಬ್ಬರದ ಚೀಲಗಳ ಅಡಿ ಗಾಂಜಾ ಪ್ಯಾಕೆಟ್‌ಗಳನ್ನು ಬಚ್ಚಿಟ್ಟು ಸಾಗಿಸುತ್ತಿದ್ದ ಐವರು ಪೆಡ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದು, 3 ಕೋಟಿ ಮೌಲ್ಯದ 1,820 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

Drug trafficking racket busted
ಡ್ರಗ್ಸ್ ಜಾಲ ಭೇದಿಸಿದ ಹೈದರಾಬಾದ್ ಪೊಲೀಸ್

By

Published : Nov 26, 2021, 12:07 PM IST

ಹೈದರಾಬಾದ್ (ತೆಲಂಗಾಣ): ಹೈದರಾಬಾದ್ ಹೊರವಲಯದ ಅಬ್ದುಲ್ಲಾಪುರಮೆಟ್‌ನಲ್ಲಿ ರಾಚಕೊಂಡ ಪೊಲೀಸರು ಅಂತಾರಾಜ್ಯ ಮಾದಕವಸ್ತು ಕಳ್ಳಸಾಗಣೆ ದಂಧೆಯನ್ನು ಭೇದಿಸಿದ್ದು, ಟ್ರಕ್‌ವೊಂದರಲ್ಲಿ ಸಾಗಿಸಲಾಗುತ್ತಿದ್ದ 3 ಕೋಟಿ ಮೌಲ್ಯದ 1,820 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ಸಿಲೇರುವಿನಿಂದ ನರಸೀಪಟ್ಟಣ, ರಾಜಮಂಡ್ರಿ, ಸೂರ್ಯಪೇಟ್, ಚೌಟುಪ್ಪಾಲ್ ಮತ್ತು ಹೈದರಾಬಾದ್ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಡ್ರಗ್ಸ್ ಸಾಗಿಸಲಾಗುತ್ತಿದ್ದ ನಿಖರ ಮಾಹಿತಿ ಮೇರೆಗೆ ಜಂಟಿಯಾಗಿ ದಾಳಿ ನಡೆಸಿದ ರಾಚಕೊಂಡ ಪೊಲೀಸ್ ಕಮಿಷನರೇಟ್‌ನ ವಿಶೇಷ ಕಾರ್ಯಾಚರಣ ತಂಡ (ಎಸ್‌ಒಟಿ), ಎಲ್‌ಬಿ ನಗರ ವಲಯದ ಪೊಲೀಸರು ಮತ್ತು ಅಬ್ದುಲ್ಲಾಪುರಮೆಟ್ ಪೊಲೀಸರು ಐವರು ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಟ್ರಕ್​ನಲ್ಲಿ ಸಾವಯವ ಗೊಬ್ಬರದ ಚೀಲಗಳ ಅಡಿಯಲ್ಲಿ ಗಾಂಜಾ ಪ್ಯಾಕೆಟ್‌ಗಳನ್ನು ಬಚ್ಚಿಡಲಾಗಿತ್ತು.

ಇದನ್ನೂ ಓದಿ: Drug war: ಮೂವರನ್ನು ಕೊಂದು, ಹೆಣಗಳನ್ನು ನೇತು ಹಾಕಿದ್ದು ಯಾಕೆ ಗೊತ್ತಾ?

ಆರೋಪಿಗಳ ಬಳಿ ಇದ್ದ 182 ಗಾಂಜಾ ಪ್ಯಾಕೆಟ್‌ಗಳು, ಒಂದು ಟ್ರಕ್​, ಒಂದು ಕಾರು, 41,000 ರೂಪಾಯಿ ನಗದು ಮತ್ತು ಏಳು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಐವರು ಬಂಧಿತ ಆರೋಪಿಗಳಲ್ಲಿ ನಾಲ್ವರು ಮಹಾರಾಷ್ಟ್ರದವರು ಮತ್ತು ಟ್ರಕ್ ಚಾಲಕ ಪಶ್ಚಿಮ ಬಂಗಾಳದವನು. ಮಹಾರಾಷ್ಟ್ರದ ಒಸ್ಮಾನಾಬಾದ್‌ ನಿವಾಸಿ ಸಂಜಯ್‌ ಲಕ್ಷ್ಮಣ್‌ ಶಿಂಧೆ ಎಂಬವನು ದಂಧೆಯ ಪ್ರಮುಖ ಆರೋಪಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ. ಈತನಿಗಾಗಿ ಬಲೆ ಬೀಸಿದ್ದೇವೆ ಎಂದು ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ತಿಳಿಸಿದ್ದಾರೆ.

ABOUT THE AUTHOR

...view details