ತರನ್ ತರನ್ (ಪಂಜಾಬ್):ಪಂಜಾಬ್ನಲ್ಲಿ ಮಾದಕವಸ್ತು ಮಾಫಿಯಾ ಜೋರಾಗಿದೆ. ಹೆರಾಯಿನ್ ಸಾಗಿಸುತ್ತಿದ್ದ ಕಳ್ಳಸಾಗಣೆದಾರರನ್ನು ಪೊಲೀಸರು 40 ಕಿ.ಮೀ ಬೆನ್ನಟ್ಟಿ ಹಿಡಿದಿದ್ದಾರೆ. ಬಂಧಿತರಿಂದ 2 ಕೆಜಿ ಡ್ರಗ್ಸ್ ವಶಪಡಿಸಿಕೊಡಿದ್ದಾರೆ. ಈ ಘಟನೆ ತರನ್ ತರನ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರಗ್ಸ್ ಅಕ್ರಮ ಸಾಗಣೆ ಮುಂದುವರಿದಿದೆ. ಇಂದು ಕಳ್ಳಸಾಗಣೆದಾರರು, 2 ಕೆಜಿ ಹೆರಾಯಿನ್ ಅನ್ನು ಸಾಗಿಸುತ್ತಿದ್ದಾಗ, ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಇದನ್ನರಿತ ಡ್ರಗ್ಸ್ ಸಾಗಣೆದಾರರು, ತಮ್ಮ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಆತನನ್ನು ಪೊಲೀಸರು ಬೆನ್ನತ್ತಿ ಸುಮಾರು 40 ಕಿ.ಮೀ ದೂರ ಚೇಸ್ ಮಾಡಿದ್ದಾರೆ. ಬಳಿಕ ಎನ್ಕೌಂಟರ್ ನಡೆಸಲಾಗಿದ್ದು, ಆರೋಪಿ ಕಾಲಿಗೆ ಗುಂಡು ತಾಗಿದೆ. ಗಾಯಗೊಂಡ ಆತ ಕೆಳಕ್ಕೆ ಬಿದ್ದಾಗ ಬಂಧಿಸಲಾಗಿದ್ದು, ಆತನಿಂದ 2 ಕೆಜಿ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಪಂಜಾಬ್ ಪೊಲೀಸರು, ಪ್ರಮುಖ ವಿದ್ಯಮಾನವೊಂದರಲ್ಲಿ ಭಾರತ-ಪಾಕ್ ಗಡಿಯಲ್ಲಿ 40 ಕಿಲೋಮೀಟರ್ ಬೆನ್ನಟ್ಟಿ ಆರೋಪಿ ಬಳಿ ಇದ್ದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಇಬ್ಬರು ಕುಖ್ಯಾತ ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ. ಚೇಸಿಂಗ್ ಸಮಯದಲ್ಲಿ ಒಬ್ಬ ಕಳ್ಳಸಾಗಣೆದಾರನ ಕಾಲಿಗೆ ಗುಂಡೇಟು ಬಿದ್ದಿದೆ. ಚೋಲಾ ಸಾಹಿಬ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.