ಮುಂಬೈ :ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜ್ಯದಲ್ಲಿ ಡ್ರಗ್ ಉದ್ಯಮದ ಮಾಸ್ಟರ್ ಮೈಂಡ್ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (NCP) ರಾಷ್ಟ್ರೀಯ ವಕ್ತಾರ ಹಾಗೂ ಮಹಾರಾಷ್ಟ್ರ ಅಲ್ಪಸಂಖ್ಯಾತ ಇಲಾಖೆ ಸಚಿವ ನವಾಬ್ ಮಲಿಕ್ ಆಘಾತಕಾರಿ ಆರೋಪ ಮಾಡಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ದೇವೇಂದ್ರ ಫಡ್ನವೀಸ್ ಭಾಗಿಯಾಗಿರುವ ಬಗ್ಗೆ ಸಿಬಿಐ ಮತ್ತು ಇತರ ಕೇಂದ್ರದ ಸಂಸ್ಥೆಗಳ ಮೂಲಕ ತನಿಖೆ ನಡೆಸಬೇಕು ಎಂದು ನವಾಬ್ ಮಲಿಕ್ ಒತ್ತಾಯಿಸಿದರು. ಅವರು ಸಿಎಂ ಆಗಿದ್ದಾಗ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರನ್ನು ಬದಲಾಯಿಸಿದ್ದರು ಎಂದು ನವಾಬ್ ಮಲಿಕ್ ಆರೋಪಿಸಿದ್ದಾರೆ.
ದೇವೇಂದ್ರ ಫಡ್ನವಿಸ್ ಪರ ನೀರಜ್ ಗುಂಡೆ ಕೆಲಸ ಮಾಡುತ್ತಿದ್ದಾರೆ. ಗೂಂಡಾಗಳ ಮೂಲಕ ಕೆಲಸ ಮಾಡುವುದೇ ದೇವೇಂದ್ರ ಫಡ್ನವೀಸ್ ಮ್ಯಾಜಿಕ್. ಡ್ರಗ್ ದಂಧೆಕೋರ ಜೈದೀಪ್ ರಾಣಾ ಅವರ ಫೋಟೋವನ್ನು ಟ್ವಿಟರ್ನಲ್ಲಿ ಹಾಕಿದ್ದೇನೆ. ವರ್ಮಾ ಎಂಬ ವ್ಯಕ್ತಿ ರಾಣಾ ಬಗ್ಗೆ ಎಲ್ಲಾ ಮಾಹಿತಿ ನೀಡಿದ್ದಾರೆ ಎಂದು ಮಲಿಕ್ ಹೇಳಿದ್ದಾರೆ.
ದೇವೇಂದ್ರ ಫಡ್ನವೀಸ್‌ಗೆ ಡ್ರಗ್ಸ್ ದಂಧೆಯೊಂದಿಗೆ ಇರುವ ಸಂಬಂಧದ ಬಗ್ಗೆ ತನಿಖೆ ನಡೆಸಬೇಕು. ಜೈದೀಪ್ ರಾಣಾ ಮತ್ತು ನೀರಜ್ ಗುಂಡೆ ಅವರೊಂದಿಗಿನ ಸಂಬಂಧವೇನು ಎಂಬ ಬಗ್ಗೆ ತನಿಖೆಯಾಗಬೇಕು.
ದೇವೇಂದ್ರ ಫಡ್ನವೀಸ್ ಅವರು ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಸುಳ್ಳು ಎಂದು ಸಾಬೀತುಪಡಿಸಲಿ. ಡ್ರಗ್ಸ್ ಪ್ರಕರಣದಲ್ಲಿ ಫಡ್ನವಿಸ್ ಭಾಗಿಯಾಗಿರುವ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ನವಾಬ್ ಮಲಿಕ್ ಒತ್ತಾಯಿಸಿದ್ದಾರೆ.
ಬಿಜೆಪಿಯ ಅನೇಕ ಜನರು ಡ್ರಗ್ ದಂಧೆಕೋರರು ಎಂದು ಮಲಿಕ್ ಆರೋಪಿಸಿದ್ದಾರೆ. ನನ್ನನ್ನು ಮಾತನಾಡದಂತೆ ತಡೆಯುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸೂಚನೆ ಮೇರೆಗೆ ರಾಜ್ಯದಲ್ಲಿ ಡ್ರಗ್ಸ್ ಆಟ ಆರಂಭವಾಗಿದೆ ಎಂದು ಮಲಿಕ್ ಆರೋಪ ಮಾಡಿದ್ದಾರೆ.
ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಅವರೊಂದಿಗೆ ಜೈದೀಪ್ ರಾಣಾ ಅವರ ಫೋಟೋ ಇದೆ. ಜೈದೀಪ್ ರಾಣಾ ಜೈಲಿನಲ್ಲಿದ್ದಾನೆ ಮತ್ತು ಮಾದಕವಸ್ತು ಕಳ್ಳಸಾಗಣೆಗಾಗಿ ಬಂಧಿಸಲಾಗಿದೆ ಎಂದಿದ್ದಾರೆ.
ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ನಿ ಅಮೃತಾ ನದಿ ಸಂರಕ್ಷಣೆಗಾಗಿ ಗೀತೆ ಹಾಡಿದ್ದರು. ಆಗಿನ ಹಣಕಾಸು ಸಚಿವ ಸುಧೀರ್ ಮುಂಗಂಟಿವಾರ್ ಕೂಡ ಇದರಲ್ಲಿ ನಟಿಸಿದ್ದನ್ನು ಪ್ರಸ್ತಾಪಿಸಿದ ಮಲಿಕ್, ಹಾಡಿನ ಫೈನಾನ್ಶಿಯರ್ ಜೈದೀಪ್ ರಾಣಾ ಎಂದು ಹೇಳಿದ್ದಾರೆ.
ಅಮೃತಾ ಜೈದೀಪ್ ರಾಣಾ ಅವರೊಂದಿಗೆ ಫೋಟೋಗಳನ್ನು ಹೊಂದಿದ್ದಾರೆ. ಈ ಫೋಟೋ ಸಾರ್ವಜನಿಕ ಸಮಾರಂಭದಲ್ಲಿ ಜನರು ಭೇಟಿಯಾಗುವ ಫೋಟೋ ಅಲ್ಲ. ಒಬ್ಬರಿಗೊಬ್ಬರು ಪರಿಚಯವಿದ್ದ ಕಾರಣ ಫೋಟೋ ತೆಗೆಯಲಾಗಿದೆ ಎಂದು ಮಲಿಕ್ ಆರೋಪಿಸಿದ್ದಾರೆ.