ನವದೆಹಲಿ: ಡ್ರಗ್ಸ್ ಸೇವಿಸುವವರನ್ನು ಜೈಲಿಗೆ ಕಳುಹಿಸುವ ಬದಲು ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಬೇಕು. ಇದಕ್ಕಾಗಿ ಕಾನೂನಿನಲ್ಲಿ ಬದಲಾವಣೆ ತರಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಾಳೆ ಅಭಿಪ್ರಾಯಪಟ್ಟಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಆರ್ಥರ್ ರಸ್ತೆ ಜೈಲಿನಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಉದ್ದೇಶಿಸಿ ಸಚಿವರು ಪರೋಕ್ಷವಾಗಿ ಈ ಹೇಳಿಕೆ ನೀಡಿದ್ದಾರೆ.
ಮದ್ಯ ಸೇವಿಸುವವರೇ ಜೈಲಿಗೆ ಹೋಗುವುದಿಲ್ಲ. ಆದರೆ ಮಾದಕ ವ್ಯಸನಿಗಳನ್ನು ಜೈಲಿಗೆ ಕಳುಹಿಸಲು ಕಾನೂನುಗಳಿವೆ. ನಾವು ಮಾದಕ ವ್ಯಸನಿಗಳನ್ನು ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಲು ಬಯಸುತ್ತೇವೆ, ಜೈಲುಗಳಿಗೆ ಅಲ್ಲ. ಇದಕ್ಕಾಗಿ ಕಾನೂನುಗಳನ್ನು ಬದಲಾಯಿಸಬೇಕಾಗಿದೆ ಎಂದು ಅಠವಾಣೆ ಸಲಹೆ ನೀಡಿದ್ದಾರೆ.
ಹದಿಹರೆಯದಲ್ಲಿ ಡ್ರಗ್ಸ್ ಸೇವನೆ ಮಾಡುವುದು ಸೂಕ್ತವಲ್ಲ. ಆರ್ಯನ್ ಖಾನ್‌ಗೆ ಉಜ್ವಲ ಭವಿಷ್ಯವಿದೆ. ಆರ್ಯನ್ ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವಂತೆ ನಾನು ಶಾರುಖ್‌ಗೆ ಸೂಚಿಸುತ್ತೇನೆ. ಜೈಲಿನಲ್ಲಿರುವುದಕ್ಕಿಂತ ಒಂದೆರಡು ತಿಂಗಳು ಪುನರ್ವಸತಿ ಕೇಂದ್ರದಲ್ಲೇ ಇರಲಿ. ದೇಶದಲ್ಲಿ ಇಂತಹ ಹಲವು ಕೇಂದ್ರಗಳಿವೆ ಎಂದಿದ್ದಾರೆ.
ಅಕ್ಟೋಬರ್ 2 ರಂದು ಮುಂಬೈನಲ್ಲಿ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಡ್ರಗ್ಸ್ ಸೇವನೆ ಆರೋಪದಲ್ಲಿ ಅಕ್ಟೋಬರ್ 8 ರಂದು ಶಾರುಖ್ ಪುತ್ರ ಆರ್ಯನ್‌ನನ್ನು ಬಂಧಿಸಲಾಗಿತ್ತು.
ನಿನ್ನೆ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್ ಆರೋಪಿ ಪರ ವಕೀಲರ ವಾದಗಳನ್ನು ಆಲಿಸಿ ಇಂದಿಗೆ(ಗುರುವಾರ) ವಿಚಾರಣೆ ಮುಂದೂಡಿದೆ. ಇಂದು ಎನ್‌ಸಿಬಿ ಪರ ವಕೀಲರ ವಾದವನ್ನು ಕೋರ್ಟ್ ಆಲಿಸಲಿದೆ.
ಇದನ್ನೂ ಓದಿ:ಆರ್ಯನ್ ಖಾನ್‌ಗೆ ಇಂದೂ ಸಿಗದ ಜಾಮೀನು ; ನಾಳೆಗೆ ವಿಚಾರಣೆ ಮುಂದೂಡಿದ ಬಾಂಬೆ ಹೈಕೋರ್ಟ್