ನವದೆಹಲಿ: ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದ ಡ್ರೋನ್ವೊಂದು ಮೆಟ್ರೋ ಹಳಿ ಮೇಲೆ ಬಿದ್ದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಇದರಿಂದ ದೆಹಲಿ ಮೆಟ್ರೋದ ಮೆಜೆಂಟಾ ಮಾರ್ಗದ ಜಸೋಲಾ ವಿಹಾರ್-ಶಾಹೀನ್ ಬಾಗ್‌ನಿಂದ ಬೊಟಾನಿಕಲ್ ಗಾರ್ಡನ್‌ವರೆಗಿನ ಸಂಚಾರವು ಸುಮಾರು ಅರ್ಧ ಗಂಟೆ ಕಾಲ ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಸೋಲಾ ವಿಹಾರ್ ಬಳಿ ಮೆಟ್ರೋ ಟ್ರ್ಯಾಕ್ ಮೇಲೆ ಡ್ರೋನ್ ಬಿದ್ದಿದೆ. ಪರಿಣಾಮ ಮೆಟ್ರೋ ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ಜೊತೆಗೆ ಮಾರ್ಗ ಮಧ್ಯದಲ್ಲೇ ರೈಲುಗಳು ನಿಂತಿದ್ದರಿಂದ ಪ್ರಯಾಣಿಕರು ಪರದಾಡಿದರು ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ನಮ್ಮ ಮೆಟ್ರೋದಿಂದ ನಾಗವಾರದಲ್ಲಿ ರಿಸೀವಿಂಗ್ ಸಬ್ ಸ್ಟೇಷನ್: 45 ಸಾವಿರ ಚದರ್ ಅಡಿ ಭೂಸ್ವಾಧೀನ ಪ್ರಕ್ರಿಯೆ ಆರಂಭ
ಡ್ರೋನ್ ಬಿದ್ದ ಮಾಹಿತಿ ಅರಿತ ದೆಹಲಿ ಪೊಲೀಸರು, ಸಿಐಎಸ್‌ಎಫ್ ಮತ್ತು ಡಿಎಂಆರ್‌ಸಿ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಡ್ರೋನ್ಅನ್ನು ತೆರವು ಮಾಡಿದ್ದಾರೆ. ಈ ಕಾರ್ಯಾಚರಣೆಯ ಸಮಯದಲ್ಲಿ ಮೆಟ್ರೋ ನಿಲ್ದಾಣವನ್ನು ಪ್ರವೇಶಿಸಲು ಅಥವಾ ನಿರ್ಗಮಿಸಲು ಯಾರಿಗೂ ಅವಕಾಶ ನೀಡಿರಲಿಲ್ಲ ಎಂದೂ ತಿಳಿದು ಬಂದಿದೆ.
ರೈಲು ಸೇವೆಗಳು ಪುನರಾರಂಭ: ಮೆಟ್ರೋ ಹಳಿಯಿಂದ ಡ್ರೋನ್ ತೆರವುಗೊಳಿಸಿದ ಅರ್ಧ ಗಂಟೆಯ ನಂತರ ರೈಲು ಸೇವೆಗಳು ಪುನರಾರಂಭಗೊಂಡವು ಎಂದು ದೆಹಲಿ ಮೆಟ್ರೋ ರೈಲ್ ಕಾರ್ಪೊರೇಶನ್ (ಡಿಎಂಆರ್‌ಸಿ) ತಿಳಿಸಿದೆ. ಸದ್ಯ ದೆಹಲಿ ಪೊಲೀಸರು ಡ್ರೋನ್ಅನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಹೆಚ್ಚಿನ ಭದ್ರತೆಯ ಪ್ರದೇಶಗಳಲ್ಲಿ ಡ್ರೋನ್‌ಗಳು ಅಪಾಯಕಾರಿ ಮತ್ತು ಅಧಿಕಾರಿಗಳ ಅನುಮತಿಯಿಲ್ಲದೆ ಅವುಗಳನ್ನು ಬಳಸುವುದು ಕಾನೂನುಬಾಹಿರ ಎಂದು ತಜ್ಞರು ತಿಳಿಸಿದ್ದಾರೆ.
ದೆಹಲಿ ಮೆಟ್ರೋಗೆ 20 ವರ್ಷ: ದೆಹಲಿ ಮೆಟ್ರೋವು ರಾಷ್ಟ್ರ ರಾಜಧಾನಿಯ ಜೀವನಾಡಿ ಎಂದೇ ಪ್ರಸಿದ್ಧವಾಗಿದ್ದು, ಇದು ಆರಂಭವಾಗಿ 20 ವರ್ಷಗಳು ಕಳೆದಿದೆ. ಕೇವಲ 8.4 ಕಿಲೋಮೀಟರ್‌ನೊಂದಿಗೆ ಪ್ರಾರಂಭವಾಗಿದ್ದ ದೆಹಲಿ ಮೆಟ್ರೋವು ಇದೀಗ ಬರೋಬ್ಬರಿ 380 ಕಿಮೀವರೆಗೆ ಹರಡಿದೆ. ಅಲ್ಲದೇ, ದೇಶದ ಅತಿದೊಡ್ಡ ಮೆಟ್ರೋ ನೆಟ್‌ವರ್ಕ್ ಎಂಬ ಖ್ಯಾತಿಯೂ ದೆಹಲಿ ಮೆಟ್ರೋಗಿದೆ.
ಇದನ್ನೂ ಓದಿ:ತೃತೀಯ ಲಿಂಗಿಯೆಂದು ಮನೆಯಿಂದ ಹೊರಹಾಕಲ್ಪಟ್ಟ ಮಹಿ: ಈಗ ಮೆಟ್ರೋ ನಿಲ್ದಾಣಗಳ ತಂಡದ ನಾಯಕಿ
2002ರ ಡಿಸೆಂಬರ್ 24ರಂದು ಮೊದಲ ದೆಹಲಿ ಮೆಟ್ರೋ ಕಾರ್ಯಾಚರಣೆ ಪ್ರಾರಂಭವಾಗಿತ್ತು. ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮೆಟ್ರೋಗೆ ಹಸಿರು ನಿಶಾನೆ ತೋರಿದ್ದರು. ಅಂದು ಶಾಹದಾರಾದಿಂದ ತೀಸ್ ಹಜಾರಿಯವರೆಗೆ 8.4 ಕಿಮೀ ದೂರದ ಮೆಟ್ರೋ ಆರಂಭವಾಗಿತ್ತು. ಸಣ್ಣ ಪ್ರಮಾಣದಲ್ಲಿ ಆರಂಭವಾಗಿದ್ದ ದೆಹಲಿ ಮೆಟ್ರೋ ಈಗ ಹತ್ತು ಬಣ್ಣ ಕೋಡೆಡ್ ಲೈನ್‌ಗಳನ್ನು ಹೊಂದಿದೆ.
ಡ್ರೈವರ್‌ಲೆಸ್ ಮೆಟ್ರೋ ಸೇವೆ: ಇಷ್ಟೇ ಅಲ್ಲ, ಒಟ್ಟಾರೆ 286 ಮೆಟ್ರೋ ನಿಲ್ದಾಣಗಳು ಇದೆ. 12 ಕಾರಿಡಾರ್ಗಳನ್ನು ಈ ಮೆಟ್ರೋ ಒಳಗೊಂಡಿದೆ. 2002ರಿಂದ 2020ರ ಅವಧಿಯಲ್ಲಿ ಈ ದೆಹಲಿ ಮೆಟ್ರೋ ನೆಟ್‌ವರ್ಕ್ ದೆಹಲಿ ಮತ್ತು ಎನ್‌ಸಿಆರ್‌ನಾದ್ಯಂತ ಘಾತೀಯವಾಗಿ ವಿಸ್ತರಿಸಿದೆ. ನೋಯ್ಡಾ-ಗ್ರೇಟರ್ ನೋಯ್ಡಾ ಮತ್ತು ರಾಪಿಡ್ ಮೆಟ್ರೋ, ಗುರುಗ್ರಾಮ್ ಸೇರಿದಂತೆ ಹಲವೆಡೆ ಮೆಟ್ರೋ ವ್ಯಾಪ್ತಿಸಿದೆ.
ಜೊತೆಗೆ ಎರಡು ಕಾರಿಡಾರ್‌ಗಳಲ್ಲಿ ಡ್ರೈವರ್‌ಲೆಸ್ ಮೆಟ್ರೋ ಸೇವೆ ಹೊಂದಿದೆ. ಅನೇಕ ಸುಧಾರಿತ ತಂತ್ರಜ್ಞಾನಗಳನ್ನೂ ಹೊಂದಿದೆ. 380 ಕಿಲೋಮೀಟರ್‌ಗಿಂತಲೂ ಹೆಚ್ಚು ಹೊಸ ಮಾರ್ಗಗಳನ್ನು ಸೇರಿಸಿರುವುದರಿಂದ ವಿಶ್ವದಲ್ಲೇ ಅತ್ಯಂತ ವೇಗವಾಗಿ ವಿಸ್ತರಣೆಯಾದ ಮೆಟ್ರೋ ಎಂಬ ಹೆಗ್ಗಳಿಕೆ ಸಹ ಪಡೆದಿದೆ.
ಇದನ್ನೂ ಓದಿ:ಕೋವಿಡ್ ನಿಯಂತ್ರಣಕ್ಕೆ ಎಲ್ಲ ಕ್ರಮ.. ಔಷಧ ಸಾಗಣೆಗೆ ಡ್ರೋನ್ಗಳ ಬಳಕೆ; ಜ್ಯೋತಿರಾದಿತ್ಯ ಸಿಂದಿಯಾ