ಮುಂಬೈ (ಮಹಾರಾಷ್ಟ್ರ) :ಅರಬ್ಬೀಸಮುದ್ರದಲ್ಲಿ ಡ್ರೋನ್ ದಾಳಿಗೆ ಒಳಗಾಗಿದ್ದ ಕಚ್ಚಾ ತೈಲವನ್ನು ಹೊತ್ತು ಮಂಗಳೂರು ಬಂದರಿಗೆ ಹೊರಟಿದ್ದ ವಾಣಿಜ್ಯ ಹಡಗು ಎಂವಿ ಕೆಮ್ ಫ್ಲೂಟೊ ಸದ್ಯ ಮುಂಬೈ ಬಂದರನ್ನು ಸುರಕ್ಷಿತವಾಗಿ ಮಂಗಳವಾರ ತಲುಪಿದೆ. ಡ್ರೋನ್ ದಾಳಿಯಿಂದಾಗಿ ಹಡಗಿನ ಮುಂಭಾಗ ತೀವ್ರವಾಗಿ ಜಖಂಗೊಂಡಿದೆ. ಹಾನಿಗೊಳಗಾದ ಭಾಗಗಳ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ.
ಸೌದಿ ಅರೇಬಿಯಾದಿಂದ ಹೊರಟಿದ್ದ ಕಚ್ಚಾ ತೈಲದ ಹಡಗಿನ ಮೇಲೆ ಡ್ರೋನ್ ದಾಳಿ ನಡೆಸಿದ್ದು, ಇರಾನ್. 2021ರಿಂದ ವಾಣಿಜ್ಯ ಹಡಗುಗಳ ಮೇಲೆ ಇರಾನಿನ 7ನೇ ದಾಳಿ ಇದಾಗಿದೆ ಎಂದು ಅಮೆರಿಕದ ಭದ್ರತಾ ಸಂಸ್ಥೆ ಹೇಳಿದೆ.
ವ್ಯಾಪಾರಿ ಹಡಗು ಡಿಸೆಂಬರ್ 19 ರಂದು ಯುಎಇಯಿಂದ ತನ್ನ ಪ್ರಯಾಣ ಪ್ರಾರಂಭಿಸಿತ್ತು. ಡಿಸೆಂಬರ್ 25 ರಂದು ನವ ಮಂಗಳೂರು ಬಂದರಿಗೆ ತಲುಪಬೇಕಿತ್ತು. ಡಿಸೆಂಬರ್ 23 ರಂದು ಗುಜರಾತ್‌ನ ವೆರಾವಲ್ ಕರಾವಳಿಯಿಂದ ಸುಮಾರು 200 ನಾಟಿಕಲ್ ಮೈಲುಗಳಷ್ಟು ದೂರದ ಅರಬ್ಬಿ ಸಮುದ್ರದಲ್ಲಿ 20 ಭಾರತೀಯ ಸಿಬ್ಬಂದಿಯಿದ್ದ ಕಚ್ಚಾ ತೈಲದ ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿತ್ತು. ಜಪಾನ್ ಒಡೆತನದ ಹಡಗು ಇದಾಗಿದ್ದು, ಇಸ್ರೇಲ್ ಸಹಭಾಗಿತ್ವ ಹೊಂದಿದೆ.
ಭಾರತೀಯ ಕೋಸ್ಟ್ ಗಾರ್ಡ್ ನೆರವು:ದಾಳಿಯ ಮಾಹಿತಿ ತಿಳಿದ ತಕ್ಷಣ ಭಾರತೀಯ ವಿಶೇಷ ಆರ್ಥಿಕ ವಲಯದಲ್ಲಿ ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್ ಹಡಗು ಐಸಿಜಿಎಸ್ ವಿಕ್ರಮ್‌ಗೆ ಸಂಕಷ್ಟದಲ್ಲಿರುವ ವ್ಯಾಪಾರಿ ಹಡಗಿನ ಕಡೆಗೆ ಹೋಗುವಂತೆ ಸೂಚಿಸಲಾಗಿತ್ತು. ಅಲ್ಲದೇ ತೊಂದರೆಯಲ್ಲಿರುವ ಹಡಗಿಗೆ ನೆರವು ನೀಡುವಂತೆ ಕೋಸ್ಟ್ ಗಾರ್ಡ್ ನೌಕೆ ಆ ಪ್ರದೇಶದಲ್ಲಿನ ಎಲ್ಲ ಹಡಗುಗಳಿಗೆ ಹೇಳಿತ್ತು. ಅದರಂತೆ ದಾಳಿಗೀಡಾದ ಎಂವಿ ಕೆಮ್ ಫ್ಲೂಟೋ ಹಡಗನ್ನು ಭಾರತೀಯ ಕೋಸ್ಟ್ ಗಾರ್ಡ್ ಮುಂಬೈ ಬಂದರಿಗೆ ತಲುಪುವಂತೆ ಮಾಡಿದೆ.