ಜಮ್ಮು: ವೈಮಾನಿಕ ಮಾರ್ಗದ ಮೂಲಕ ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡುವ ಹೊಸ ಪ್ರಯತ್ನವನ್ನು ಉಗ್ರರು ಮಾಡಿದ್ದು, ಪಾಕ್ನ ಕುತಂತ್ರ ಬುದ್ಧಿ ಅರಿತ ಭಾರತೀಯ ಸೇನೆ ಜಮ್ಮುವಿನ ಗಡಿ ಪ್ರದೇಶದಲ್ಲಿ ಡ್ರೋನ್‌ನಿಂದ ಬೀಳಿಸಲಾದ ಮೂರು ಮ್ಯಾಗ್ನೆಟಿಕ್ ಐಇಡಿಗಳನ್ನು ವಶಪಡಿಸಿಕೊಂಡಿದೆ.
ಅಖ್ನೂರ್ ಸೆಕ್ಟರ್‌ನ ಕನಚಕ್‌ನ ಕಾಂಟೋವಾಲಾ-ದಯಾರನ್ ಪ್ರದೇಶದಿಂದ ಟಿಫಿನ್ ಬಾಕ್ಸ್‌ಗಳಲ್ಲಿ ಟೈಮರ್‌ಗಳನ್ನು ಹೊಂದಿಸಿ ಪ್ಯಾಕ್ ಮಾಡಲಾದ ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮುಖೇಶ್ ಸಿಂಗ್ ತಿಳಿಸಿದ್ದಾರೆ.
ಓದಿ:ಕುಪ್ವಾರಾ ಎನ್ಕೌಂಟರ್: ಪಾಕ್ ಭಯೋತ್ಪಾದಕ ಸೇರಿ ಎಲ್ಇಟಿಯ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ
ಸೋಮವಾರ ರಾತ್ರಿ ಭಾರತ-ಪಾಕಿಸ್ತಾನ ಗಡಿಯ ಜಮ್ಮು ಜಿಲ್ಲೆಯಲ್ಲಿ ಬಿಎಸ್‌ಎಫ್ ಪಡೆಗಳಿಗೆ ಗುಂಡು ಹಾರಿಸುವ ಶಬ್ದ ಕೇಳಿದ್ದು, ಈ ಸ್ಥಳದಲ್ಲಿ ಡ್ರೋನ್ನ ಚಲನವಲನ ನಡೆದಿರುವುದರ ಬಗ್ಗೆ ಯೋಧರು ಅನುಮಾನ ವ್ಯಕ್ತಪಡಿಸಿದ್ದರು. ಕೂಡಲೇ ಪೊಲೀಸ್ ಪಾರ್ಟಿಯನ್ನು ನಿಯೋಜಿಸಿ ಆ ಪ್ರದೇಶದಲ್ಲಿ ಆ್ಯಂಟಿ-ಡ್ರೋನ್ ಸ್ಟ್ಯಾಂಡರ್ಡ್ ಆಪರೇಟಿಂಗ್ ವಿಧಾನವನ್ನು ಕೈಗೊಂಡರು ಎಂದು ಎಡಿಜಿಪಿ ತಿಳಿಸಿದ್ದಾರೆ.
ರಾತ್ರಿ 11 ಗಂಟೆ ಸುಮಾರಿಗೆ ಕನಚಕ್‌ನ ದಯಾರನ್ ಪ್ರದೇಶದಲ್ಲಿ ಡ್ರೋನ್ ಅನ್ನು ಗಮನಿಸಿದ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಡ್ರೋನ್ ಕ್ಯಾರಿ ಮಾಡುತ್ತಿದ್ದ ವಸ್ತು ಕೆಳಗೆ ಬಿದ್ದಿದೆ. ಆದ್ರೆ ಡ್ರೋನ್ಗೆ ಶೂಟ್ ಮಾಡಲು ಸಾಧ್ಯವಾಗಲಿಲ್ಲ. ಡ್ರೋನ್ ಕ್ಯಾರಿ ಮಾಡುತ್ತಿದ್ದ ವಸ್ತುವನ್ನು ಪರಿಶೀಲನೆ ನಡೆಸುತ್ತಿದ್ದಾಗ ಮೂರು ಮ್ಯಾಗ್ನೆಟಿಕ್ ಐಇಡಿಗಳು ಕಂಡು ಬಂದಿವೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಎಡಿಜಿಪಿ ಮಾಹಿತಿ ನೀಡಿದ್ದಾರೆ.