ಈರೋಡ್ (ತಮಿಳುನಾಡು) :ಕಳೆದಎರಡು ದಿನಗಳ ಹಿಂದೆ ತಮಿಳುನಾಡು ಮತ್ತು ಕರ್ನಾಟಕದ ಗಡಿಯಲ್ಲಿರುವ ಸತ್ಯಮಂಗಲ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬನ್ನಾರಿ ಅರಣ್ಯ ಚೆಕ್ ಪೋಸ್ಟ್‌ನಲ್ಲಿ ಅರಣ್ಯಾಧಿಕಾರಿಗಳು ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೋ ಸೆರೆ ಹಿಡಿದಿದ್ದಕ್ಕೆ ತಾಳವಾಡಿ ಮೂಲದ ಚಾಲಕ ಜಗ್ಗ ಎಂಬುವರಿಗೆ ಅರಣ್ಯಾಧಿಕಾರಿಗಳು ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.
ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರಣ್ಯ ರಕ್ಷಕ ಚಿತ್ರಾ, ವಾಹನ ಪ್ರವೇಶ ಶುಲ್ಕ ವಸೂಲಿ ಮಾಡುತ್ತಿದ್ದ ಮನೋಜ್ ಮತ್ತು ಅರುಣ್ ಪಾಂಡಿಯನ್ ಎಂಬುವರ ಮೇಲೆ ಆರೋಪ ಕೇಳಿ ಬಂದಿದ್ದು, ವಿಡಿಯೋ ತೆಗೆದ ಚಾಲಕನಿಂದ ವಾಹನದ ಕೀ ಮತ್ತು ಸೆಲ್ ಫೋನ್ ಕಿತ್ತುಕೊಂಡು ಹಲ್ಲೆಗೆ ಮುಂದಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಈ ಕುರಿತು ಚಾಲಕ ಮಾತನಾಡಿದ್ದು, ಬನ್ನಾರಿ ಚೆಕ್‌ಪೋಸ್ಟ್‌ನಲ್ಲಿ ಎರಡು ದಿನಗಳಿಂದ ಅರಣ್ಯಾಧಿಕಾರಿಗಳು ಚಾಮರಾಜನಗರ ಜಿಲ್ಲೆಯ ಚಾಲಕನ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿರುವುದರಿಂದ ನಾನೇ ವಿಡಿಯೋ ಮಾಡಿರುವುದು ಎಂದು ಚೆಕ್ ಪೋಸ್ಟ್ ಬಳಿ ವಾಹನ ತಡೆದರು. ಈ ಸಂದರ್ಭದಲ್ಲಿ ನನ್ನ ಮೊಬೈಲ್ ಹಾಗೂ ವಾಹನದ ಕೀಗಳನ್ನು ಕಿತ್ತುಕೊಂಡು ಪೊಲೀಸ್ ಅಧಿಕಾರಿ ಸರವಣನ್ ಅವರು ನನ್ನ ಮೊಬೈಲ್ ರೀಸೆಟ್ ಮಾಡಿದ್ದಾರೆ. ಬಳಿಕ ತಾಳವಡಿ ರೈತ ಸಂಘದ ಆಡಳಿತಾಧಿಕಾರಿಗಳು ಸೇರಿದಂತೆ ವಿವಿಧ ಪಕ್ಷಗಳ ಮಧ್ಯಪ್ರವೇಶದ ನಂತರ, ಚಾಲಕರ ಜಗ್ಗ ಅವರ ಮೊಬೈಲ್ ಮತ್ತು ವಾಹನದ ಕೀಗಳನ್ನು 4 ಗಂಟೆಗಳ ವಿಳಂಬದ ನಂತರ ಹಿಂತಿರುಗಿಸಲಾಗಿದೆ.