ಮುಂಬೈ: ಇಥಿಯೋಪಿಯಾದಿಂದ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನಿಂದ ಸೋಪ್ ಬಾರ್‌ಗಳಲ್ಲಿ ಬಚ್ಚಿಟ್ಟಿದ್ದ ಅಂದಾಜು ₹ 25 ಕೋಟಿ ಮೌಲ್ಯದ 2.58 ಕೆಜಿ ಕೊಕೇನ್ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ತಂಡ ವಶಕ್ಕೆ ಪಡೆದಿದೆ. ಕೋಕೆನ್ ಕಳ್ಳಸಾಗಣೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಅಡಿಸ್ ಅಬಾಬಾ (ಇಥಿಯೋಪಿಯಾ) ದಿಂದ ಮುಂಬೈಗೆ ಮಾದಕ ವಸ್ತು ಕೊಕೇನ್ ಕಳ್ಳಸಾಗಣೆ ಮಾಡುತ್ತಿರುವ ನಿರ್ದಿಷ್ಟ ಮಾಹಿತಿ ಅರಿತ ಡಿಆರ್‌ಐ ತಂಡ,ಈ ಕಳ್ಳಸಾಗಣೆ ಜಾಲ ಭೇದಿಸಲೂ ನಗರದ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿ ನಿರಂತರ ಕಣ್ಗಾವಲು ಇರಿಸಿದೆ.
ಫೆಬ್ರವರಿ 27 ರಂದು ಬೆಳಗ್ಗೆ ಅಡಿಸ್ ಅಬಾಬಾ (ಇಥಿಯೋಪಿಯಾ) ದಿಂದ ಮುಂಬೈಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಶಂಕಿತ ಪ್ರಯಾಣಿಕರನ್ನು ಡಿಆರ್‌ಐ ಅಧಿಕಾರಿಗಳ ತಂಡವು ತಡೆಹಿಡಿದು ಪರಿಶೀಲಿಸಿದೆ. ನಂತರ ಶಂಕಿತ ಪ್ರಯಾಣಿಕರ ಟ್ರಾಲಿ ಬ್ಯಾಗ್ನಲ್ಲಿದ್ದ ಸಾಮಾನುಗಳನ್ನು ಕೂಲಂಕಷವಾಗಿ ಶೋಧಿಸಿದಾಗ 12 ಸೋಪ್ ಬಾರ್‌ಗಳಲ್ಲಿ ಬಚ್ಚಿಟ್ಟಿದ್ದ 2.58 ಕೆಜಿ ಕೊಕೇನ್ ಇರುವುದು ಪತ್ತೆಯಾಗಿದೆ.
ಡಿಆರ್‌ಐ ತಂಡವೂ 2.58 ಕೆಜಿ ಕೊಕೇನ್ ವಶಪಡಿಸಿಕೊಂಡು, ತಕ್ಷಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಕ್ಷಣ ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿದೆ. ನಂತರ ಕಳ್ಳಸಾಗಣೆಯಲ್ಲಿ ತೊಡಗಿದ್ದ ಇನ್ನೊಬ್ಬ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಡಿಆರ್‌ಐ ತಂಡ ಯಶಸ್ವಿಯಾಗಿದೆ. ಪ್ರಸ್ತುತ ಸಿಕ್ಕಿರುವ ಕೊಕೇನ್ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ 25 ಕೋಟಿ ರೂ.ಕ್ಕಿಂತ ಹೆಚ್ಚು ಎಂದು ಡಿಆರ್ ಐ ಅಂದಾಜಿಸಿದೆ.