ಮುಂಬೈ(ಮಹಾರಾಷ್ಟ್ರ): ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 6.2 ಕೋಟಿ ರೂಪಾಯಿ ಮೌಲ್ಯದ 10 ಕೆ.ಜಿ ಚಿನ್ನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಭಾನುವಾರ ವಶಪಡಿಸಿಕೊಂಡಿದೆ. ಈ ಎರಡೂ ಪ್ರಕರಣಗಳಲ್ಲಿ ಒಟ್ಟು 4 ಮಂದಿಯನ್ನು ಬಂಧಿಸಲಾಗಿದೆ.
ಮೊದಲ ಪ್ರಕರಣದಲ್ಲಿ ದುಬೈನಿಂದ ಬಂದ ಭಾರತೀಯ ಪ್ರಜೆಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಪರಿಶೀಲಿಸಲಾಯಿತು. ಈ ವೇಳೆ, ಪ್ರಯಾಣಿಕರ ಸಾಮಾನು ಸರಂಜಾಮುಗಳನ್ನು ಪರಿಶೀಲಿಸಲಾಗಿದ್ದು, 56 ಮಹಿಳೆಯರ ಪರ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪರ್ಸ್ಗಳಲ್ಲಿ 24 ಕ್ಯಾರೆಟ್ ಚಿನ್ನ ಮತ್ತು ಬೆಳ್ಳಿ ಬಣ್ಣದ ಲೋಹದ ತಂತಿ ಪತ್ತೆಯಾಗಿದೆ. ವಶಪಡಿಸಿಕೊಂಡ ಚಿನ್ನದ ತಂತಿಯ ನಿವ್ವಳ ತೂಕ 2005 ಗ್ರಾಂ ಆಗಿದೆ. ಅದರ ಮೌಲ್ಯ ಸುಮಾರು 1,23,80,875 ಎಂದು ಅಂದಾಜಿಸಲಾಗಿದೆ. ಪ್ರಕರಣದಲ್ಲಿ ಆರೋಪಿ ಪ್ರಯಾಣಿಕನನ್ನು ಬಂಧಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಗೌಪ್ಯ ಮಾಹಿತಿ ಆಧರಿಸಿ ಶಾರ್ಜಾದಿಂದ ಮುಂಬೈಗೆ ತೆರಳುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ನಂ. ಐಎಕ್ಸ್ 252ರಲ್ಲಿ ತಡೆ ಹಿಡಿಯಲಾಗಿದೆ. ಈ ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ 24 ಕ್ಯಾರೆಟ್‌ನ 8 ಚಿನ್ನದ ತುಂಡುಗಳನ್ನು ಅವರ ಸೊಂಟದ ಸುತ್ತ ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿದೆ. ತನಿಖೆ ವೇಳೆ 4.94 ಕೋಟಿ ಮೌಲ್ಯದ 8 ಕೆಜಿ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಮತ್ತೊಬ್ಬ ಸಹ ಪ್ರಯಾಣಿಕನನ್ನು ಬಂಧಿಸಲಾಗಿದೆ.
ದೇಶದಲ್ಲಿ ವಿವಿಧ ರೀತಿಯ ಚಿನ್ನದ ಕಳ್ಳಸಾಗಣೆ ಪ್ರಕರಣ ತನಿಖೆ ಮಾಡುವಲ್ಲಿ ಡಿಆರ್‌ಐ ಅಧಿಕಾರಿಗಳು ನಿಯಮಿತವಾಗಿ ಶ್ರಮಿಸುತ್ತಿದ್ದಾರೆ. ಸದ್ಯ ಎರಡೂ ಪ್ರಕರಣಗಳಲ್ಲಿ ಡಿಆರ್‌ಐ ಹೆಚ್ಚಿನ ತನಿಖೆ ನಡೆಸುತ್ತಿದೆ.