ಪಾಟ್ನಾ (ಬಿಹಾರ): ಕಂದಾಯ ಗುಪ್ತಚರ ನಿರ್ದೇಶನಾಲಯವು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಸೂಡಾನ್ ಪ್ರಜೆಗಳ ಬೃಹತ್ ಚಿನ್ನ ಕಳ್ಳಸಾಗಣೆ ಜಾಲವನ್ನು ಕಂಡುಹಿಡಿದಿದ್ದಾರೆ. ಬಿಹಾರದ ಪಾಟ್ನಾ ಮತ್ತು ಮಹಾರಾಷ್ಟ್ರದ ಪುಣೆ ಹಾಗೂ ಮುಂಬೈನಲ್ಲಿ ದಾಳಿ ನಡೆಸಿ 51 ಕೋಟಿ ರೂಪಾಯಿ ಮೌಲ್ಯದ 101.7 ಕೆಜಿ ಕಳ್ಳಸಾಗಣೆ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಅಕ್ರಮ ಜಾಲದಲ್ಲಿದ್ದ 10 ಜನ ಕಳ್ಳಸಾಗಾಣಿಕೆದಾರರು ಸಿಕ್ಕಿಬಿದ್ದಿದ್ದಾರೆ. ಈ ಪೈಕಿ ಏಳು ಜನರು ಸುಡಾನ್ ಪ್ರಜೆಗಳಾದರೆ, ಮೂವರು ಭಾರತೀಯರು. ನೇಪಾಳ ಗಡಿ ಮೂಲಕ ಈ ಜಾಲ ಕಾರ್ಯನಿರ್ವಹಿಸುತ್ತಿತ್ತು ಎಂದು ತಿಳಿದು ಬಂದಿದೆ. ಭಾರತ-ನೇಪಾಳ ಗಡಿ ಮೂಲಕ ಪಾಟ್ನಾಗೆ ಕಳ್ಳಸಾಗಾಣಿಕೆದಾರರು ಬರುತ್ತಿದ್ದರು. ನಂತರ ವಿಮಾನ ಮತ್ತು ರೈಲಿನ ಮೂಲಕ ಅಕ್ರಮ ವಹಿವಾಟು ನಡೆಸುತ್ತಿದ್ದರು.