ಚೆನ್ನೈ, ತಮಿಳುನಾಡು: ಶ್ರೀಲಂಕಾದಿಂದ ರಾಮನಾಥಪುರದ ಉತ್ತರ ಕರಾವಳಿಯ ತಂಗಚಿಮಡಂ ಮೂಲಕ ಮೀನುಗಾರಿಕಾ ದೋಣಿಗಳಲ್ಲಿ ವಿದೇಶಿ ಚಿನ್ನವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಡಿಆರ್‌ಐ ಅಧಿಕಾರಿಗಳಿಗೆ ಸುಳಿವು ಸಿಕ್ಕಿದೆ. ಇದನ್ನು ಆಧರಿಸಿ ತೀವ್ರ ನಿಗಾ ವಹಿಸಿದಾಗ ತಂಗಚಿಮಡಂನ ಉತ್ತರ ಕರಾವಳಿ ಬಳಿ ನಾಲ್ವರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಕಳ್ಳಸಾಗಣಿಕೆಯ ವಿಷಯ ಬೆಳಕಿಗೆ ಬಂದಿದೆ.
ಬಂಧಿತರಿಂದ 5.37 ಕೋಟಿ ಮೌಲ್ಯದ 9.063 ಕೆಜಿ ತೂಕದ ವಿದೇಶಿ ಕಳ್ಳಸಾಗಣೆ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಕಳೆದ ಜುಲೈ 31 ರಂದು ಶ್ರೀಲಂಕಾದಿಂದ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಬಳಸಲಾಗಿದ್ದ ಎರಡು ದೋಣಿಗಳ ಜೊತೆಗೆ ಕಳ್ಳಸಾಗಣೆ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಚಿನ್ನ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ನಾಲ್ಕು ಜನರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಡಿಆರ್‌ಐ ಮೂಲಗಳು ತಿಳಿಸಿವೆ..
ಜುಲೈ 31 ರಂದು ನಡೆದ ಮತ್ತೊಂದು ಪ್ರಕರಣದಲ್ಲಿ ಡಿಆರ್‌ಐ ಅಧಿಕಾರಿಗಳು ಚಿನ್ನ ಕಳ್ಳ ಸಾಗಣೆ ಆರೋಪದಡಿ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಡಿಆರ್‌ಐ ಅಧಿಕಾರಿಗಳು ಶಾರ್ಜಾದಿಂದ ಕೊಯಮತ್ತೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವಿಮಾನವನ್ನು ಶೋಧಿಸಿದರು. ಈ ವೇಳೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಶೋಧಿಸಿದಾಗ ಸುಮಾರು 3.17 ಕೋಟಿ ರೂಪಾಯಿ ಮೌಲ್ಯದ 5.17 ಕೆಜಿ ವಿದೇಶಿ ಚಿನ್ನವನ್ನು ಅಕ್ರಮವಾಗಿ ಸಾಗಿಸಿರುವುದು ಪತ್ತೆಯಾಗಿದೆ. ಈ ಸಂಬಂಧ ಇಬ್ಬರು ಪ್ರಯಾಣಿಕರನ್ನು ಬಂಧಿಸಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.