ನವದೆಹಲಿ:ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು 10,000 ಡೋಸ್ 2 ಡಿಜಿ ಔಷಧಿಗಳನ್ನು ಮುಂದಿನ ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಕೋವಿಡ್ ಸೋಂಕಿತ ರೋಗಿಗಳ ಚಿಕಿತ್ಸೆಗಾಗಿ 10,000 ಡೋಸ್ ಔಷಧದ ಮೊದಲ ಹಂತವನ್ನು ಮುಂದಿನ ವಾರದಲ್ಲಿ ಪ್ರಾರಂಭಿಸಲಾಗುವುದು ಮತ್ತು ರೋಗಿಗಳಿಗೆ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಯಾರಕರು ಭವಿಷ್ಯದ ಬಳಕೆಗಾಗಿ ಔಷಧಿ ಉತ್ಪಾದನೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತಿದ್ದಾರೆ. ಡಾ. ಅನಂತ್ ನಾರಾಯಣ್ ಭಟ್ ಸೇರಿದಂತೆ ಡಿಆರ್‌ಡಿಒ ವಿಜ್ಞಾನಿಗಳ ತಂಡವು ಈ ಔಷಧಿಯನ್ನು ಅಭಿವೃದ್ಧಿಪಡಿಸಿದೆ ಎಂದು ಡಿಆರ್‌ಡಿಒ ಅಧಿಕಾರಿಗಳು ವಿವರಿಸಿದರು.
ಶುಕ್ರವಾರ ಕರ್ನಾಟಕದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಡಿಆರ್‌ಡಿಒ ಆವರಣಕ್ಕೆ ಭೇಟಿ ನೀಡಿದ್ದರು. ಕೋವಿಡ್ ವಿರುದ್ಧ ಹೋರಾಟ ನಡೆಸುವ 2-ಡಿಜಿ ಔಷಧದ ಬಗ್ಗೆ ಡಿಆರ್‌ಡಿಒ ವಿಜ್ಞಾನಿಗಳು ಸಚಿವರಿಗೆ ವಿವರಿಸಿದರು.
ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಪರಿಹಾರಗಳನ್ನು ಕಂಡುಹಿಡಿಯಲು ಪ್ರಧಾನ ಸಂಶೋಧನಾ ಸಂಸ್ಥೆಯಲ್ಲಿ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಡಾ. ಕೆ. ಸುಧಾಕರ್ ಅವರಿಗೆ ವಿಜ್ಞಾನಿಗಳು ವಿವರಣೆ ನೀಡಿದರು. ಮತ್ತೊಂದು ಪ್ರಧಾನ ವಿಜ್ಞಾನ ಸಂಸ್ಥೆ ಐಐಎಸ್ಸಿಯೊಂದಿಗೆ ಸಚಿವರು ಸಂವಹನ ನಡೆಸಿದರು ಎಂದು ರಾಜ್ಯ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ.
ಡಿಆರ್‌ಡಿಒ ಅಭಿವೃದ್ಧಿಪಡಿಸಿದ 2-ಡಿಜಿ ಔಷಧವು ಒಂದು ದೊಡ್ಡ ಪ್ರಗತಿಯಾಗಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಇದರ ಹೋರಾಟ ಮಹತ್ವದ್ದಾಗಿದೆ. ಏಕೆಂದರೆ ಇದು ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಔಷಧಿಯಿಂದ ಆಮ್ಲಜನಕದ ಅವಲಂಬನೆ ಕಡಿಮೆಯಾಗತ್ತದೆ.
ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಯಾರಿಸಿದ 1 ಲಕ್ಷ 50 ಸಾವಿರ ಸಂಖ್ಯೆಯ ಆಕ್ಸಿಕೇರ್ ಸಿಸ್ಟಮ್ಗಳನ್ನು 322.5 ಕೋಟಿ ರೂಪಾಯಿ ನೀಡಿ ಪಡೆದುಕೊಳ್ಳಲು ಪಿಎಂ ಕೇರ್ಸ್ ಫಂಡ್ ಅನುಮೋದನೆ ನೀಡಿದೆ. ಬುಧವಾರ ಡಿಆರ್ಡಿಓ ಸ್ವತಃ ಈ ಮಾಹಿತಿ ನೀಡಿದೆ. ಆಕ್ಸಿಕೇರ್ ಸಿಸ್ಟಮ್ ಇದು SpO2 ಆಧಾರಿತ ಆಕ್ಸಿಜನ್ ಪೂರೈಕೆ ವ್ಯವಸ್ಥೆಯಾಗಿದ್ದು, ಸೆನ್ಸಡ್ SpO2 ಲೆವೆಲ್ ಆಧಾರದಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಆಕ್ಸಿಜನ್ ಮಟ್ಟವನ್ನು ನಿರ್ವಹಿಸುತ್ತದೆ.