ಒಡಿಶಾ/ ಮಯೂರ್‌ಭಂಜ್: ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಅಚ್ಚರಿಯ ಅಭ್ಯರ್ಥಿಯನ್ನು ಘೋಷಿಸಿದೆ. ಜಾರ್ಖಂಡ್ ಮಾಜಿ ರಾಜ್ಯಪಾಲೆ, ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿ ಪ್ರಕಟಿಸಿದೆ. ಈ ಹಿನ್ನೆಲೆ ದ್ರೌಪದಿ ಮುರ್ಮು ಅವರು ಇಂದು ಬೆಳಗ್ಗೆ ರಾಯರಂಗಪುರದ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಾಲಯವನ್ನ ಗುಡಿಸಿ, ಸ್ವಚ್ಛಗೊಳಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ದ್ರೌಪದಿ ಮುರ್ಮು ವಿವರ:ದ್ರೌಪದಿ ಮುರ್ಮು ಅವರು ಜೂನ್ 20, 1958 ರಂದು ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಬೈದಪೋಸಿ ಗ್ರಾಮದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಬಿರಂಚಿ ನಾರಾಯಣ ಟುಡು. ಸಂತಾಲ್ ಬುಡಕಟ್ಟು ಜನಾಂಗಕ್ಕೆ ಸೇರಿದರಾದ ದ್ರೌಪದಿ, ಶ್ಯಾಮ್ ಚರಣ್ ಮುರ್ಮು ಅವರನ್ನು ವಿವಾಹವಾದರು.
1997 ರಲ್ಲಿ ರಾಯರಂಗಪುರ ಪುರಸಭೆಯ ಕೌನ್ಸಿಲರ್ ಆಗಿ ಆಯ್ಕೆಯಾದ ನಂತರ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದೇ ವರ್ಷ ಅವರು ರಾಯರಂಗಪುರ ಪುರಸಭೆಯ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಶಾಲಾ ಶಿಕ್ಷಕರಾಗಿ ಮತ್ತು ನಾಲ್ಕು ವರ್ಷಗಳ ಕಾಲ ರಾಜ್ಯ ಸರ್ಕಾರದಲ್ಲಿ 1983 ರವರೆಗೆ ನೀರಾವರಿ ಮತ್ತು ವಿದ್ಯುತ್ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಕೆಲಸ ಮಾಡಿದ್ದಾರೆ.