ಮುಂಬೈ: ಭಾರತದ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಸಾರ್ವಜನಿಕ ಜೀವನಕ್ಕೆ ಹೊಸಬರೇನಲ್ಲ. 1997ರಲ್ಲಿ ನಗರ ಪಾಲಿಕೆಯ ಸದಸ್ಯರಾಗಿದ್ದರಿಂದ ಹಿಡಿದು 2022ರಲ್ಲಿ ದೇಶದ ಪ್ರಥಮ ಪ್ರಜೆಯಾಗುವವರೆಗೆ ಸಾರ್ವಜನಿಕ ಸೇವೆಯಲ್ಲಿ ಅನೇಕ ಮಹತ್ವದ ಸ್ಥಾನಗಳನ್ನು ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಜೊತೆಗೆ, ನೂತನ ರಾಷ್ಟ್ರಪತಿಗಳು ಹಲವಾರು ಹೊಸ, ಕುತೂಹಲಕರ ದಾಖಲೆಗಳನ್ನೂ ಬರೆದಿದ್ದಾರೆ. ಹಾಗಾದ್ರೆ ಬನ್ನಿ, ಮುರ್ಮು ಅವರ ಬಗೆಗಿನ ಮತ್ತಷ್ಟು ಇಂಟೆರೆಸ್ಟಿಂಗ್ ವಿಷಯಗಳನ್ನು ತಿಳಿಯೋಣ.
1.ಮುರ್ಮು ಅವರು ಬುಡಕಟ್ಟು ಜನಾಂಗದ ಪ್ರಥಮ ರಾಷ್ಟ್ರಪತಿಯಾಗಿದ್ದಾರೆ. ಪ್ರತಿಭಾ ಪಾಟೀಲ್ (2007-2012) ನಂತರ ಈ ಹುದ್ದೆ ಅಲಂಕರಿಸಿದ 2ನೇ ಮಹಿಳೆಯಾಗಿದ್ದಾರೆ. ಡಾ.ಎಸ್.ರಾಧಾಕೃಷ್ಣನ್ (1962-1967), ಡಾ. ಜಾಕೀರ್ ಹುಸೇನ್ (1967-69), ಡಾ.ಶಂಕರ ದಯಾಳ ಶರ್ಮಾ (1992-1997), ಕೆ.ಆರ್. ನಾರಾಯಣನ್ (1997-2002), ಮತ್ತು ಪ್ರಣಬ್ ಮುಖರ್ಜಿ (2012-17) ಅವರ ನಂತರ ಶಿಕ್ಷಣ ಕ್ಷೇತ್ರದ ಹಿನ್ನೆಲೆಯನ್ನು ಹೊಂದಿರುವ 6ನೇ ರಾಷ್ಟ್ರಪತಿಗಳಾಗಿದ್ದಾರೆ.
2. ಪುತ್ರಿ ಇತಿಶ್ರೀ ಹೆಂಬ್ರಮ್ ಹೇಳುವ ಪ್ರಕಾರ, ಅವರೊಬ್ಬ ಕಠಿಣ ಆಡಳಿಗಾರ್ತಿ. ತಮ್ಮ 64ನೇ ವಯಸ್ಸಿನಲ್ಲಿ ರಾಷ್ಟ್ರಪತಿಯಾಗುವ ಮೂಲಕ ಮುರ್ಮು, ಈ ಹಿಂದೆ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದ ನೀಲಂ ಸಂಜೀವ ರೆಡ್ಡಿ (1977-1982) ಅವರನ್ನು ಹಿಂದಿಕ್ಕಿದ್ದಾರೆ. ಚಿಕ್ಕಂದಿನಲ್ಲಿ ಬಹಳ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಮುರ್ಮು, ತಮ್ಮ ಬುಡಕಟ್ಟು ಸಮುದಾಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪ್ರಥಮ ವ್ಯಕ್ತಿಯಾದರು. ಅವರ ತಂದೆ ಬಿರಂಚಿ ಟುಡು ಹಾಗೂ ತಾತ ನಾರಾಯಣ ಟುಡು ಬುಡಕಟ್ಟು ಸಮುದಾಯದ ನಾಯಕರಾಗಿದ್ದರು.
3.ಪ್ರಾಥಮಿಕ ಶಿಕ್ಷಣ ಕಲಿತ ಶಾಲೆಯನ್ನು ಬಿಟ್ಟು ಹೊರಡುವ ಸಮಯದಲ್ಲಿ, ಜೀವನದಲ್ಲಿ ನೀನು ಮುಂದೆ ಏನು ಮಾಡಬೇಕೆಂದು ಬಯಸಿರುವೆ ಎಂದು ಅಲ್ಲಿನ ಮುಖ್ಯೋಪಾಧ್ಯಾಯರು ಪ್ರಶ್ನಿಸಿದ್ದರಂತೆ. ಚಿಕ್ಕ ಯವಸ್ಸಿನ ಮುರ್ಮು ಅವತ್ತು ಮುಗ್ಧವಾಗಿ, 'ಸಾರ್ವಜನಿಕ ಸೇವೆ' ಎಂದುತ್ತರಿಸಿದ್ದರಂತೆ. ಅದಾಗಿ ಐದು ದಶಕಗಳ ನಂತರ ಅವರು ದೇಶದ ಪ್ರಥಮ ಪ್ರಜೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಶಾಲಾ ಶಿಕ್ಷಣ ಮುಗಿದ ನಂತರ ಉನ್ನತ ಶಿಕ್ಷಣ ಕೊಡಿಸುವ ಸಲುವಾಗಿ, ಶಾಸಕ ಹಾಗೂ ಸಚಿವರಾಗಿದ್ದ ಚಾಚಾ ಕಾರ್ತಿಕ್ ಚರಣ ಮಾಂಝಿ (1967) ಮುರ್ಮು ಅವರನ್ನು ಭುವನೇಶ್ವರಕ್ಕೆ ಕರೆದುಕೊಂಡು ಬಂದಿದ್ದರು. ಅಲ್ಲಿನ ರಮಾ ದೇವಿ ಮಹಾವಿದ್ಯಾಲಯದಲ್ಲಿ ಮುರ್ಮು ಅವರು 1979 ರಲ್ಲಿ ಸ್ನಾತಕೋತ್ತರ ಪದವಿ ಪಡೆದರು.
4. ಅದೇ ವರ್ಷದಲ್ಲಿ ಒಡಿಶಾ ಸರ್ಕಾರದ ಇಲಾಖೆಯೊಂದರಲ್ಲಿ ಗುಮಾಸ್ತರಾಗಿ ಕೆಲಸ ಆರಂಭಿಸಿದ ಅವರು ಸುಮಾರು ವರ್ಷ ಅಲ್ಲಿಯೇ ಕೆಲಸ ಮಾಡಿದರು. ಈ ಮಧ್ಯೆ ಉಪರಬೇಡಾ ದಿಂದ 10 ಕಿಲೋಮೀಟರ್ ದೂರದ ಪಹಾಡಪುರದಲ್ಲಿ ವಾಸಿಸುತ್ತಿದ್ದ, ಬ್ಯಾಂಕ್ ಆಫ್ ಇಂಡಿಯಾ ನೌಕರರಾಗಿದ್ದ ಶ್ಯಾಮ ಚರಣ ಮುರ್ಮು ಅವರೊಂದಿಗೆ ವಿವಾಹವಾಯಿತು. ದಂಪತಿಗೆ ಜನಿಸಿದ ಮೊದಲ ಮಗು ಮೂರು ವರ್ಷದ್ದಾಗಿದ್ದಾಗ ತೀರಿಕೊಂಡಿತು. ಇದರ ನಂತರ ಇಬ್ಬರು ಪುತ್ರರು- ಲಕ್ಷ್ಮಣ ಮತ್ತು ಸಿಪುನ್, ಓರ್ವ ಪುತ್ರಿ-ಇತಿಶ್ರೀ ಜನಿಸಿದರು.