ಹೈದರಾಬಾದ್:ಘಟ್ಕೇಸರ್ ಬಳಿ ಬಿ.ಫಾರ್ಮಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗಿದ್ದ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.
ಘಟನೆ ಮರುಸೃಷ್ಟಿ...
ನಾಲ್ವರು ಆಟೋ ಡ್ರೈವರ್ಗಳನ್ನು ವಶಕ್ಕೆ ಪಡೆದ ಪೊಲೀಸರು ಘಟನೆಯನ್ನು ಮರುಸೃಷ್ಟಿ ಮಾಡುತ್ತಿರುವ ಸಮಯದಲ್ಲಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಆಕೆ ಅಪಹರಣಕ್ಕೆ ಗುರಿಯಾಗಿಲ್ಲವೆಂಬುದು ಸಿಸಿಟಿವಿ ದೃಶ್ಯಗಳ ಮೂಲಕ ಪೊಲೀಸರು ಕಂಡು ಹಿಡಿದ್ದಾರೆ.
ಪೊಲೀಸರಿಗೆ ಸವಾಲ್...
ಸಿಸಿಟಿವಿ ಪರಿಶೀಲಿಸಿದಾಗ ಯುವತಿಯು ಯುವಕನೋರ್ವನ ಬೈಕ್ನಲ್ಲಿ ತೆರಳುತ್ತಿರುವುದು ಕಂಡುಬಂದ ಹಿನ್ನೆಲೆ ಪೊಲೀಸರಿಗೆ ನೂರಾರು ಪ್ರಶ್ನೆಗಳು ಮೂಡಿವೆ. ಈ ಪ್ರಕರಣವನ್ನು ರಾಚಕೊಂಡ ಪೊಲೀಸರು ಸವಾಲು ಆಗಿ ಪರಿಗಣಿಸಿದ್ದಾರೆ.
ನಡೆದಿದ್ದೇನು?
ರಾಂಪಲ್ಲಿಯ ಆರ್.ಎಲ್.ನಗರದ ಯುವತಿ ಬುಧವಾರ ಸಂಜೆ ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ತಾಯಿಗೆ ಫೋನ್ ಮಾಡಿ ನನ್ನನ್ನು ಆಟೋ ಡ್ರೈವರ್ ಅಪಹರಿಸಿ ಎಲ್ಲೋ ಕರೆದೊಯ್ದಿದ್ದಾರೆ ಎಂದು ಹೇಳಿದ್ದಾಳೆ. ಗಾಬರಿಗೊಂಡ ತಾಯಿ 100ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ನಂತರ ಸೆಲ್ ಫೋನ್ ಸಿಗ್ನಲ್‌ಗಳನ್ನು ಆಧರಿಸಿದ ಪೊಲೀಸರು ಸಂತ್ರಸ್ತೆಯನ್ನು ಅನ್ನೋಜಿಗುಡಾದ ಸರ್ವಿಸ್ ರಸ್ತೆ ಬಳಿ ಗುರುತಿಸಿ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಯುವತಿಗೆ ಪ್ರಜ್ಞೆ ಮರಳಿ ಬಂದ ನಂತರ ನನ್ನ ಮೇಲೆ ಕೆಲ ಆಟೋ ಚಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಮತ್ತು ವೈದ್ಯರ ಮುಂದೆ ಹೇಳಿದ್ದಾಳೆ. ಕಾರ್ಯಪ್ರವೃತ್ತರಾದ ಪೊಲೀಸರು ಗುರುವಾರ ಮುಂಜಾನೆ ನಾಲ್ವರು ಆಟೋ ಚಾಲಕರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.
ತನಿಖೆ ಚುರುಕು...
ಸಂತ್ರಸ್ತೆ ಹೇಳಿದ ವಿವರಗಳ ಆಧಾರದ ಮೇಲೆ ಪೊಲೀಸರು ಗುರುವಾರ ರಾತ್ರಿ ಘಟನೆಯನ್ನು ಮರು ಸೃಷ್ಟಿ ಮಾಡಲು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದಿದ್ದರು. ಆರೋಪಿಗಳು ಹೇಳಿದ ವಿವರಗಳು ಘಟನೆಗೆ ಸಂಬಂಧಪಟ್ಟಂತೆ ಕಾಣುತ್ತಿರಲಿಲ್ಲ. ಹೀಗಾಗಿ ಘಟನೆ ಬಗ್ಗೆ ಅನುಮಾನಗೊಂಡ ಪೊಲೀಸರು ಸ್ಥಳೀಯ ಸಿಸಿಟಿವಿಯನ್ನು ಮತ್ತೊಮ್ಮೆ ಪರಿಶೀಲಿಸಿದರು.
ಒಂಟಿಯಾಗಿ ತಿರುಗುತ್ತಿದ್ದ ಯುವತಿ...
ಸಂತ್ರಸ್ತೆ ಘಟ್ಕೇಸರ್, ಯನ್ನಂಪೇಟೆ ಮತ್ತು ಅನ್ನೋಜಿಗುಡಾದಲ್ಲಿ ಸಂಜೆ 6 ರಿಂದ 7.30 ರವರೆಗೆ ಏಕಾಂಗಿಯಾಗಿ ಅಲೆದಾಡುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಆ ಸಮಯದಲ್ಲಿ ಆಟೋ ಚಾಲಕರ ಸೆಲ್ಫೋನ್ ನೆಟ್ವರ್ಕ್ ಸಂಕೇತಗಳು ಆ ಪ್ರದೇಶಗಳಲ್ಲಿ ಕಂಡು ಬರದಿರುವುದು ಪೊಲೀಸರಿಗೆ ಅಚ್ಚರಿ ಮೂಡಿತು. ಹಾಗಾದ್ರೇ ಆಟೋ ಡ್ರೈವರ್ಗಳು ಆಕೆಯ ಮೇಲೆ ಅತ್ಯಾಚಾರ ಎಸಗಿಲ್ಲ ಎಂಬುದು ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿಯಿತು.
ಯುವತಿಗೆ ಮತ್ತೆ ಪ್ರಶ್ನೆ ಮಾಡಿದ ಪೊಲೀಸರು..
ಸಾಕ್ಷ್ಯಾಧಾರಗಳ ಹಿನ್ನೆಲೆ ಸಂತ್ರಸ್ತೆಯನ್ನು ಪೊಲೀಸರು ಮತ್ತೆ ಪ್ರಶ್ನಿಸಿದರು. ಕತ್ತಲೆಯಾದ್ರೂ ಮನೆಗೆ ಏಕೆ ಬರಲಿಲ್ಲ ಎಂದು ತಾಯಿ ಪದೇ ಪದೇ ಫೋನ್ ಮಾಡುತ್ತಿದ್ದರು. ಹೀಗಾಗಿ ಆಟೋ ಡ್ರೈವರ್ ನನ್ನನ್ನು ಎಲ್ಲೋ ಕರೆದೊಯ್ದಿದ್ದಾರೆ ಎಂದು ತಾಯಿಗೆ ಸಂದೇಶ ಮಾಡಿರುವುದನ್ನು ಯುವತಿ ಒಪ್ಪಿಕೊಂಡಿದ್ದಾಳೆ.
ಅತ್ಯಾಚಾರ ನಡೆದಿದೆ ಎಂದ ವೈದ್ಯರು!
ಆಕೆ ಮೇಲೆ ಅತ್ಯಾಚಾರ ನಡೆದಿದೆ ಎಂದು ವೈದ್ಯರು ದೃಢೀಕರಿಸಿದ ಹಿನ್ನೆಲೆ ಸಂತ್ರಸ್ತೆ ದೊರಕಿದ ಸ್ಥಳವನ್ನು ಪೊಲೀಸರು ಮತ್ತೊಮ್ಮೆ ಪರಿಶೀಲಿಸಿದರು. ಅತ್ಯಾಚಾರ ನಡೆದಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಪೊಲೀಸರಿಗೆ ಲಭ್ಯವಾಗಲಿಲ್ಲ. ಅತ್ಯಾಚಾರ ಎಲ್ಲಿ ನಡೆಯಿತು ಎಂಬ ಪ್ರಶ್ನೆಗೆ ಸಂತ್ರಸ್ತೆಯು ಅನಿರ್ದಿಷ್ಟ ಉತ್ತರಗಳನ್ನು ನೀಡುತ್ತಿದ್ದರಿಂದ ಆಕೆಯ ಮಾನಸಿಕ ಸ್ಥಿತಿಯ ಬಗ್ಗೆಯೂ ಪೊಲೀಸರು ಅನುಮಾನ ವ್ಯಕ್ತಪಡಿಸಿದರು. ಆ ದೃಷ್ಟಿಕೋನದಲ್ಲಿ ಪೊಲೀಸರು ತನಿಖೆ ಆರಂಭಿಸಿದರು.
ಪೋಷಕರು ಹೇಳಿದ್ದೇನು?
ಆಕೆಯ ಮಾನಸಿಕ ಸ್ಥಿತಿಯ ಬಗ್ಗೆ ಅನುಮಾನಗೊಂಡ ಪೊಲೀಸರು ಯುವತಿಯ ಪೋಷಕರು ಮತ್ತು ಸ್ನೇಹಿತರನ್ನು ವಿಚಾರಣೆ ನಡೆಸಿದರು. ಯುವತಿ ಜೊತೆ ಹೆಚ್ಚು ಸಲುಗೆಯಿಂದ ಇದ್ದ ವ್ಯಕ್ತಿಯನ್ನು ಪೊಲೀಸರು ವಿಚಾರಿಸಿದರು. ನನ್ನನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆಂದು ನನಗೆ ಫೋನ್ ಮಾಡಿ ಈ ಹಿಂದೊಮ್ಮೆ ಹೇಳಿದ್ದಳು. ಆದ್ರೆ ಅದು ಸುಳ್ಳು ಎಂದು ತಿಳಿತು. ಆಗಿನಿಂದಲೂ ಆಕೆಯಿಂದ ದೂರವಿದ್ದೆ ಎಂದು ಆ ವ್ಯಕ್ತಿ ಪೊಲೀಸರಿಗೆ ವಿವರಿಸಿದ್ದಾನೆ.
ಪೊಲೀಸರ ಮುಂದೆ ನೂರಾರು ಪ್ರಶ್ನೆಗಳು!
ಆಕೆ ಮೇಲೆ ಅತ್ಯಾಚಾರ ನಡೆದಿರುವುದರ ಬಗ್ಗೆ ವೈದ್ಯರು ಏಕೆ ವರದಿ ನೀಡಿದ್ದಾರೆ?. ಆ ಸಮಯದಲ್ಲಿ ಯುವತಿ ಆ ಪ್ರದೇಶಗಳಲ್ಲಿ ಏಕೆ ಅಲೆದಾಡಿದ್ದಾಳೆ? ಎಂಬುದರ ಬಗ್ಗೆ ಪೊಲೀಸರ ಮುಂದೆ ನೂರಾರು ಪ್ರಶ್ನೆಗಳಿವೆ. ಒಟ್ಟಿನಲ್ಲಿ ಯುವತಿ ನಮ್ಮ ದಾರಿಯನ್ನು ತಪ್ಪಿಸಿದ್ದಾರೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿರುವುದು ವರದಿಯಾಗಿದೆ.