ತಿರುವನಂತಪುರಂ (ಕೇರಳ): ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಮಹಿಳೆ ಸೇರಿ ಕುಟುಂಬದ ನಾಲ್ವರು ಸದಸ್ಯರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನೆಡುಮಂಗಡ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ ಹೊರಡಿಸಿದೆ.
ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಸಿಜೊ ರಾಜನ್, ಪೋಷಕರು ಮತ್ತು ಸಹೋದರರನ್ನು ಒಳಗೊಂಡ ಕುಟುಂಬ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಕೇರಳ ಹೈಕೋರ್ಟ್ ಜಾಮೀನು ರದ್ದುಗೊಳಿಸಿ ಕೆಳ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಈ ಹಿನ್ನೆಲೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕುಟುಂಬ ಶರಣಾಗಿದ್ದು, ಇಲ್ಲಿಯೂ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ.
ವರದಕ್ಷಿಣೆ ಪಿಡುಗನ್ನು ತೊಡೆದು ಹಾಕುವುದು ಪ್ರತಿಯೊಬ್ಬರ ಕರ್ತವ್ಯ, ಇಂಥ ವಿಚಾರಗಳಲ್ಲಿ ಮೃದು ಧೋರಣೆ ತೋರಿದರೆ, ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಬಳಿಕ ಮಾತನಾಡಿದ ಸಂತ್ರಸ್ತೆಯ ಪರ ವಕೀಲ ಥಾಮಸ್ ಅನಕ್ಕಲ್ಲುಂಕಲ್, ಕುಟುಂಬಕ್ಕೆ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದು ಅಪರೂಪದ ಪ್ರಕರಣಗಳಲ್ಲಿ ಒಂದಾಗಿದೆ. ನ್ಯಾಯಾಲಯ ನೀಡಿರುವ ತೀರ್ಪು ಸಮಾಜಕ್ಕೆ ಸರಿಯಾದ ಸಂದೇಶ ರವಾನಿಸಿದೆ ಎಂದರು.