ಬಾರಾಮತಿ(ಮಹಾರಾಷ್ಟ್ರ): ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರು ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದವರು ಎಂದು ತೋರಿಸುವ ಪ್ರಮಾಣಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಟೀಕೆಗೆ ಶರದ್ ಪವಾರ್ ನೇರ ಉತ್ತರ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನು ನನ್ನ ಜಾತಿಯನ್ನು ಮರೆಮಾಡಲು ಬಯಸುವುದಿಲ್ಲ. ಅದನ್ನು ಮಾಧ್ಯಮವಾಗಿ ಬಳಸಿಕೊಂಡು ಎಂದಿಗೂ ರಾಜಕೀಯ ಮಾಡಿಲ್ಲ. ಇಡೀ ಜಗತ್ತಿಗೆ ನನ್ನ ಜಾತಿ ಯಾವುದೆಂದು ತಿಳಿದಿದೆ. ನಾನು ಜಾತಿ ಆಧಾರಿತ ರಾಜಕೀಯ ಮಾಡಿಲ್ಲ, ಎಂದಿಗೂ ಮಾಡಲಾರೆ. ಆದರೆ, ಸಮುದಾಯದ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತೇನೆ. ಒಬಿಸಿ ಸಮುದಾಯದ ಬಗ್ಗೆ ನನಗೆ ಗೌರವವಿದೆ" ಎಂದು ಪವಾರ್ ಹೇಳಿದರು.
ಮರಾಠ ಸಮುದಾಯದ ಕೋಟಾ ಕುರಿತು ಮಾತನಾಡಿದ ಎನ್‌ಸಿಪಿ ಸಂಸ್ಥಾಪಕ, "ಮೀಸಲಾತಿ ನೀಡುವ ಅಧಿಕಾರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವ್ಯಾಪ್ತಿಯಲ್ಲಿದೆ. ಮೀಸಲಾತಿ ಕುರಿತು ಯುವ ಪೀಳಿಗೆಯ ಭಾವನೆ ತೀವ್ರವಾಗಿದ್ದು ಅದನ್ನು ನಿರ್ಲಕ್ಷಿಸುವಂತಿಲ್ಲ. ಆದರೆ, ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ರಾಜ್ಯ ಮತ್ತು ಕೇಂದ್ರಕ್ಕಿದೆ" ಎಂದರು.
ಎನ್‌ಸಿಪಿ ಸಂಸದೆ ಮತ್ತು ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಈ ದಾಖಲೆಯನ್ನು ನಕಲಿ ಎಂದು ಕರೆದಿದ್ದಾರೆ. ಹಾಗೆಯೇ, ಎನ್‌ಸಿಪಿ ನಾಯಕ ವಿಕಾಸ್ ಪಾಸಲ್ಕರ್ ಕೂಡ ಪ್ರತಿಕ್ರಿಯೆ ನೀಡಿ, ಇದು ನಕಲಿ ಎಂದು ಹೇಳಿದ್ದಾರೆ. ಅಲ್ಲದೆ, ಶರದ್ ಪವಾರ್ ಅವರ ಶಾಲೆ ಬಿಟ್ಟ ಪ್ರಮಾಣ ಪತ್ರವನ್ನು ಮಾಧ್ಯಮಗಳ ಮುಂದಿಟ್ಟು, ಈ ಪ್ರಮಾಣಪತ್ರದಲ್ಲಿ 'ಮರಾಠ' ಎಂದು ನಮೂದಿಸಲಾಗಿದೆ ಅಂತಾ ತೋರಿಸಿ ಸ್ಪಷ್ಟಪಡಿಸಿದ್ದಾರೆ.