ಮುಂಬೈ: ಮಹಾರಾಷ್ಟ್ರದ ಗೃಹಸಚಿವರು ಪ್ರತಿ ತಿಂಗಳು ತಮಗೆ 100 ಕೋಟಿ ರೂಪಾಯಿ ಲಂಚ ಸಂಗ್ರಹಿಸಿ ಕೊಡುವಂತೆ ಕ್ರೈಂ ಬ್ರ್ಯಾಂಚ್ ಇನ್ಸ್ಪೆಕ್ಟರ್ ಆಗಿದ್ದ ಸಚಿನ್ ವಾಜೆಗೆ ಸೂಚಿಸಿದ್ದರು ಎಂದು ಆರೋಪಿಸಿ ಬಹಿರಂಗವಾಗಿ ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದ ಮುಂಬೈ ಮಹಾನಗರ ಮಾಜಿ ಪೊಲೀಸ್ ಆಯುಕ್ತ ಪರಮ್ಬೀರ್ ಸಿಂಗ್ ವಿರುದ್ದ ಶಿವಸೇನೆ ಭಾರಿ ಆಕ್ರೋಶ ವ್ಯಕ್ತಪಡಿಸಿದೆ. ಪಕ್ಷದ ಅಧಿಕೃತ ಮುಖವಾಣಿ ಸಾಮ್ನಾದಲ್ಲಿ ಈ ಕುರಿತು ಸಂಪಾದಕೀಯವೊಂದನ್ನು ಬರೆಯಲಾಗಿದ್ದು, ಪರಮ್ಬೀರ್ ಅವರನ್ನು ಬಳಸಿಕೊಂಡು ಕೇಂದ್ರದ ಬಿಜೆಪಿ ಸರ್ಕಾರ ಮಹಾರಾಷ್ಟ್ರದ ಮಹಾವಿಕಾಸ ಅಘಾಡಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಅದು ಆರೋಪಿಸಿದೆ.
ಪರಮ್ ಬೀರ್ ಮೂಲಕ ಸರ್ಕಾರ ಪತನಕ್ಕೆ ಯತ್ನಿಸದಿರಿ; ಬಿಜೆಪಿಗೆ ಶಿವಸೇನೆ ನೇರ ಎಚ್ಚರಿಕೆ
ಪರಮ್ ಬೀರ್ ಅಂಥವರ ಮೂಲಕ ಸರ್ಕಾರದ ವಿರುದ್ಧ ಆರೋಪಗಳನ್ನು ಹೊರಿಸಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಬಿಂಬಿಸುವ ಪ್ರಯತ್ನಗಳನ್ನು ಪ್ರತಿಪಕ್ಷ ಬಿಜೆಪಿ ಮಾಡುತ್ತಿದೆ. ಇದಕ್ಕಾಗಿ ಪ್ರತಿದಿನ ಅದು ಹೊಸ ಹೊಸ ದಾಳಗಳನ್ನು ಉರುಳಿಸುತ್ತಿದೆ ಎಂದು ಸಾಮ್ನಾ ಸಂಪಾದಕೀಯದಲ್ಲಿ ಆರೋಪಿಸಲಾಗಿದೆ.
ಮುಕೇಶ ಅಂಬಾನಿಯ ಆ್ಯಂಟಿಲಿಯಾ ಬಂಗಲೆಯ ಬಳಿ ಸ್ಫೋಟಕ ತುಂಬಿದ್ದ ವಾಹನ ನಿಲ್ಲಿಸಿದ ಪ್ರಕರಣದಲ್ಲಿ ಸಚಿನ್ ವಾಜೆ ಭಾಗಿಯಾಗಿರುವ ಬಗ್ಗೆ ಸ್ಪಷ್ಟವಾಗತೊಡಗಿದೆ. ಸದ್ಯ ಈ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ, ವಿಚಾರಣೆಗಾಗಿ ಪರಮ್ ಬೀರ್ ಸಿಂಗ್ ಅವರನ್ನೂ ಕರೆಯುವ ಸಾಧ್ಯತೆಯಿದೆ. ಹೀಗಾಗಿ ಈ ಪ್ರಕರಣದಲ್ಲಿ ಸಿಲುಕುವುದರಿಂದ ತಪ್ಪಿಸಿಕೊಳ್ಳಲು ಪರಮ್ ಬೀರ್ ಸರ್ಕಾರದ ಸಚಿವರ ವಿರುದ್ಧ ಇಲ್ಲ ಸಲ್ಲದ ಆಪಾದನೆ ಮಾಡುತ್ತಿದ್ದಾರೆ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.
ಪರಮ್ ಬೀರ್ ಅವರಂಥವರ ಮೂಲಕ ಸರ್ಕಾರದ ವಿರುದ್ಧ ಆರೋಪಗಳನ್ನು ಹೊರಿಸಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಬಿಂಬಿಸುವ ಪ್ರಯತ್ನಗಳನ್ನು ಪ್ರತಿಪಕ್ಷ ಬಿಜೆಪಿ ಮಾಡುತ್ತಿದೆ. ಇದಕ್ಕಾಗಿ ಪ್ರತಿದಿನ ಅದು ಹೊಸ ಹೊಸ ದಾಳಗಳನ್ನು ಉರುಳಿಸುತ್ತಿದೆ. ಕಾನೂನು ಸುವ್ಯವಸ್ಥೆಯ ನೆಪದಲ್ಲಿ ರಾಷ್ಟ್ರಪತಿ ಆಳ್ವಿಕೆಯ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸಿದೆ. ಆದರೆ, ರಾಜ್ಯ ಸರ್ಕಾರಕ್ಕೆ ಈಗಲೂ ಸಂಪೂರ್ಣ ಬಹುಮತವಿದ್ದು, ಒಂದೊಮ್ಮೆ ಬಹುಮತವಿರುವ ಸರ್ಕಾರದ ಪತನಕ್ಕೆ ಯತ್ನಿಸಿದಲ್ಲಿ ಬೆಂಕಿ ಹೊತ್ತಿಕೊಳ್ಳಲಿದೆ ಎಂದು ಶಿವಸೇನೆಯು ಈ ಸಂಪಾದಕೀಯದ ಮೂಲಕ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದೆ.