ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ "ಬ್ಲಾಕ್ ಮ್ಯಾಜಿಕ್" ಹೇಳಿಕೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ವಾಗ್ದಾಳಿ ನಡೆಸಿದ್ದು, ಇಂತಹ ಮೂಢನಂಬಿಕೆಗಳ ಬಗ್ಗೆ ಮಾತನಾಡುವ ಮೂಲಕ ಪ್ರಧಾನಿ ಹುದ್ದೆಯ ಗೌರವವನ್ನು ಕಡಿಮೆ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ದೇಶದಲ್ಲಿನ ಹಣದುಬ್ಬರ ಅಥವಾ ನಿರುದ್ಯೋಗ ಸಮಸ್ಯೆ ಪ್ರಧಾನಿಗೆ ಕಾಣಿಸುತ್ತಿಲ್ಲವೆ ಎಂದು ಅವರು ಪ್ರಶ್ನಿಸಿದ್ದಾರೆ.
ಬೆಲೆಯೇರಿಕೆ ವಿರೋಧಿಸಿ ಆಗಸ್ಟ್ 5 ರಂದು ಕಪ್ಪು ಬಟ್ಟೆ ಧರಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಇದನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ್ದ ಪ್ರಧಾನಿ ಮೋದಿ, ಮಾಟ ಮಂತ್ರದಲ್ಲಿ (ಕಾಲಾ ಜಾದೂ) ನಂಬಿಕೆ ಇಟ್ಟವರು ಮತ್ತೆ ಎಂದಿಗೂ ಜನರ ವಿಶ್ವಾಸವನ್ನು ಗಳಿಸಲು ಸಾಧ್ಯವಿಲ್ಲ ಎಂದಿದ್ದರು.
ಪ್ರಧಾನಿ ಹುದ್ದೆಯ ಘನತೆಯನ್ನು ಕಡಿಮೆ ಮಾಡುವುದನ್ನು ನಿಲ್ಲಿಸಿ ಮತ್ತು ನಿಮ್ಮ ಕರಾಳ ಕೃತ್ಯಗಳನ್ನು ಮರೆಮಾಚಲು 'ಬ್ಲಾಕ್ ಮ್ಯಾಜಿಕ್'ನಂತಹ ಮೂಢನಂಬಿಕೆಗಳ ಬಗ್ಗೆ ಮಾತನಾಡುವ ಮೂಲಕ ದೇಶವನ್ನು ದಾರಿ ತಪ್ಪಿಸದಿರಿ ಪ್ರಧಾನಿಯವರೇ.. ನೀವು ಜನರ ಸಮಸ್ಯೆಗಳಿಗೆ ಉತ್ತರ ನೀಡಬೇಕಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
900 ಕೋಟಿ ಮೌಲ್ಯದ ಎರಡನೇ ತಲೆಮಾರಿನ ಎಥೆನಾಲ್ ಸ್ಥಾವರವನ್ನು ಲೋಕಾರ್ಪಣೆ ಮಾಡಲು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪಾಣಿಪತ್‌ನಲ್ಲಿ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, ಆಗಸ್ಟ್ 5 ರಂದು ಕೆಲವರು ಬ್ಲ್ಯಾಕ್ ಮ್ಯಾಜಿಕ್ ಮಾಡಲು ಪ್ರಯತ್ನಿಸಿರುವುದನ್ನು ನಾವು ನೋಡಿದ್ದೇವೆ. ಕಪ್ಪು ಬಟ್ಟೆ ಧರಿಸುವ ಮೂಲಕ ಈ ಜನ ತಮ್ಮ ಹತಾಶೆಯಿಂದ ಹೊರಬರಬಹುದು ಎಂದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದರು.
ಇದನ್ನು ಓದಿ:ಕೆಲವರು ಹತಾಶೆ, ಋಣಾತ್ಮಕತೆಯಲ್ಲೇ ಮುಳುಗಿದ್ದಾರೆ: ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ