ನವದೆಹಲಿ:ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ಸಂಬೋಧಿಸಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಹೇಳಿಕೆ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಇದೇ ವಿಷಯವನ್ನಿಟ್ಟುಕೊಂಡು ಬಿಜೆಪಿ ಸಂಸದರು ಸಂಸತ್ನಲ್ಲಿ ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ ಕ್ಷಮೆಯಾಚನೆಗೆ ಪಟ್ಟು ಹಿಡಿದಿದೆ. ಈ ಮಧ್ಯೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಸೋನಿಯಾ ಗಾಂಧಿ ನಾಟಕೀಯ ರೀತಿಯಲ್ಲಿ ನಿಂದಿಸಿದ್ದಾರೆಂದು ಹೇಳಲಾಗ್ತಿದೆ.
ಸದನ ಮುಂದೂಡಿದ ನಂತರ ಅಲ್ಲಿಂದ ಹೊರ ಬಂದ ಸೋನಿಯಾ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಸೇರಿದಂತೆ ಬಿಜೆಪಿಯ ಕೆಲ ಮಹಿಳಾ ಸಂಸದರು ಘೋಷಣೆ ಕೂಗಿದ್ದಾರೆ. ಈ ವೇಳೆ, ಬಿಜೆಪಿ ಸಂಸದೆ ರಮಾದೇವಿ ಬಳಿ ತೆರಳಿ ಇದರಲ್ಲಿ ನನ್ನನ್ನು ಏಕೆ ಎಳೆದು ತರಲಾಗುತ್ತಿದೆ ಎಂದು ಪ್ರಶ್ನೆ ಮಾಡಿದ್ದಾಗಿ ವರದಿಯಾಗಿದೆ. ಸ್ಥಳದಲ್ಲಿದ್ದ ಸಚಿವೆ ಸ್ಮೃತಿ ಇರಾನಿ ಮಧ್ಯಪ್ರವೇಶ ಮಾಡಲು ಮುಂದಾದ ಸಂದರ್ಭದಲ್ಲಿ 'ನನ್ನೊಂದಿಗೆ ಮಾತನಾಡಬೇಡಿ' ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಸ್ಮೃತಿ ಇರಾನಿ "ಮೇಡಂ, ನಾನು ನಿಮಗೆ ಸಹಾಯ ಮಾಡಲೇ? ನಾನೇ ನಿಮ್ಮ ಹೆಸರು ಬಳಸಿದ್ದೇನೆ" ಎಂದಿದ್ದಾರೆ. ಆದರೆ, ಸೋನಿಯಾ, ’’ನನ್ನ ಜತೆ ಮಾತನಾಡಬೇಡಿ" ಎಂದು ಸಿಟ್ಟಿನಿಂದ ಹೇಳಿದ್ದಾರೆ ಎಂದು ವರದಿಯಾಗಿದೆ. ರಾಷ್ಟ್ರಪತ್ನಿ ಹೇಳಿಕೆ ವಿಚಾರವಾಗಿ ಲೋಕಸಭೆಯಲ್ಲಿ ದೊಡ್ಡ ಮಟ್ಟದ ಗದ್ದಲ ಉಂಟಾಗಿದೆ. ಬಿಜೆಪಿ ಮತ್ತು ವಿಪಕ್ಷಗಳ ಸದಸ್ಯರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿದೆ. ಬಿಜೆಪಿ ಸಂಸದರು ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ವಿರುದ್ಧ ಜೋರಾಗಿ ಘೋಷಣೆ ಕೂಗಿದರು.