ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರಿಗೆ ಬಂದ ಜೀವ ಬೆದರಿಕೆ ಪತ್ರದ ಪ್ರಕರಣದಲ್ಲಿ ತನ್ನ ಯಾವುದೇ ಪಾತ್ರ ಇಲ್ಲ ಎಂದು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ನಿರಾಕರಿಸಿದ್ದಾನೆ.
ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರಂತೆ ನಟ ಸಲ್ಮಾನ್ ಮತ್ತು ಅವರ ತಂದೆ ಇಬ್ಬರನ್ನೂ ಹತ್ಯೆ ಮಾಡಲಾಗುವುದು ಎಂಬ ಭಾನುವಾರ ಅನಾಮಧೇಯ ಬೆದರಿಕೆ ಪತ್ರ ಬಂದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿಯನ್ನು ಮಂಗಳವಾರ ದೆಹಲಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ದೆಹಲಿ ಪೊಲೀಸರ ಪ್ರಕಾರ, ಈ ವಿಷಯಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಮತ್ತು ಆ ಪತ್ರವನ್ನು ಯಾರು ಕಳುಹಿಸಿದ್ದಾರೆ ಎಂದು ನನಗೆ ಗೊತ್ತಿಲ್ಲ ಎಂದು ಬಿಷ್ಣೋಯಿ ಹೇಳಿದ್ದಾನೆ. ಈ ನಡುವೆ ಮುಂಬೈ ಪೊಲೀಸರು ಸಲ್ಮಾನ್ ಖಾನ್ ಅವರಿಗೆ ಭದ್ರತೆ ಹೆಚ್ಚಿಸಿದ್ದಾರೆ.
ಕಳೆದ ಮೇ 29ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರಾಗಿದ್ದ ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದರು. ಇದಾದ ಕೆಲ ದಿನಗಳಲ್ಲೇ ಮೂಸೆ ವಾಲಾ ಅವರಂತೆ ಕೊಲೆ ಮಾಡಲಾಗುತ್ತದೆ ಎಂದು ನಟ ಸಲ್ಮಾನ್ಗೂ ಜೀವ ಬೆದರಿಕೆ ಪತ್ರ ಬಂದಿದೆ.
ಇದನ್ನೂ ಓದಿ:ಪಂಜಾಬಿ ಗಾಯಕ ಸಿಧು ಮೂಸೆವಾಲಾ ಕುಟುಂಬವನ್ನು ಭೇಟಿ ಮಾಡಿದ ರಾಹುಲ್ ಗಾಂಧಿ