ಗುವಾಹಟಿ:ಗೋರಕ್ಷಣೆಗಾಗಿ ಸರ್ಕಾರಗಳು ಏನೆಲ್ಲಾ ಕಾಯ್ದೆಗಳನ್ನು ಜಾರಿ ಮಾಡಿದ್ದರೂ, ಈದ್ ಆಚರಣೆಯ ವೇಳೆ ಪ್ರಾಣಿಬಲಿ(ಗೋವು) ಎಗ್ಗಿಲ್ಲದೇ ನಡೆಯುತ್ತದೆ. ಇದನ್ನು ಮಾಡದಂತೆ ಅಸ್ಸೋಂ ರಾಜ್ಯದ ಮುಸ್ಲಿಂ ರಾಜಕೀಯ ಮುಖಂಡರೊಬ್ಬರು ಕರೆ ನೀಡಿದ್ದಾರೆ.
ಜುಲೈ 10ರಂದು ಆಚರಿಸುವ ಈದ್ ಸಂದರ್ಭದಲ್ಲಿ ಗೋವುಗಳನ್ನು ಬಲಿ ನೀಡದಂತೆ ಅಸ್ಸೋಂನ ಮುಸ್ಲಿಂ ಸಮುದಾಯವನ್ನು ಲೋಕಸಭೆ ಸಂಸದ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಒತ್ತಾಯಿಸಿದ್ದಾರೆ.
"ಭಾರತ ವಿವಿಧ ಸಮುದಾಯ, ಜನಾಂಗ ಮತ್ತು ಧರ್ಮಗಳ ನೆಲೆಬೀಡಾಗಿದೆ. ಗೋವನ್ನು ಪವಿತ್ರ ಸಂಕೇತವಾಗಿ ಪೂಜಿಸುವ ಸನಾತನ ನಂಬಿಕೆಯನ್ನು ಬಹುಪಾಲು ಭಾರತೀಯರು ಆಚರಿಸುತ್ತಾರೆ. ಹಿಂದೂಗಳು ಗೋವನ್ನು ತಾಯಿ ರೂಪದಲ್ಲಿ ಕಾಣುತ್ತಾರೆ. ಹಬ್ಬದ ಆಚರಣೆ ನೆಪದಲ್ಲಿ ಯಾವುದೇ ಪ್ರಾಣಿಗಳನ್ನು ಬಲಿ ಕೊಡುವುದು ಒಳ್ಳೆಯದಲ್ಲ" ಎಂದಿದ್ದಾರೆ.
ಜವಾಬ್ದಾರಿ ಮೆರೆಯಿರಿ:ಧಾರ್ಮಿಕ ಜವಾಬ್ದಾರಿ ಮೆರೆಯಲು ಮತ್ತು ಇತರರ ಭಾವನೆಗಳಿಗೆ ಧಕ್ಕೆ ತರುವುದನ್ನು ತಪ್ಪಿಸಲು ಮುಸ್ಲಿಂ ಸಮುದಾಯವು ಹಸುಗಳನ್ನು ಬಲಿ ಕೊಡುವ ಬದಲಾಗಿ, ಇತರ ಪ್ರಾಣಿಗಳನ್ನು ಬಳಸಿಕೊಳ್ಳಲು ಸಂಸದ ಅಜ್ಮಲ್ ವಿನಂತಿಸಿದರು.