ಉಜ್ಜಯಿನಿ (ಮಧ್ಯಪ್ರದೇಶ): ದೇಶದ 12 ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿರುವ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಮೂರು ತಿಂಗಳ ಹಿಂದೆ ಹೊಸ ಸ್ಪರ್ಶ ನೀಡಲಾಗಿದೆ. ಕಳೆದ ಅಕ್ಬೋಬರ್ನಲ್ಲಿ ಮಹಾಕಾಲ್ ಕಾರಿಡಾರ್ ಅನ್ನು ಪ್ರಧಾನಿ ಮೋದಿ ದೇಶದ ಜನತೆಗೆ ಅರ್ಪಿಸಿದ್ದಾರೆ. ಅಂದಿನಿಂದಲೂ ಪ್ರಸಿದ್ಧ ಈ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಮತ್ತೊಂದೆಡೆ, ಮಹಾಕಾಳೇಶ್ವರ ದೇವಸ್ಥಾನಕ್ಕೆ ಬರುವ ಕಾಣಿಕೆ ಪ್ರಮಾಣವೂ ಹೆಚ್ಚಿದೆ.
ಒಂದೇ ವರ್ಷದಲ್ಲಿ ಆದಾಯ ದ್ವಿಗುಣ: ಮಹಾಕಾಳೇಶ್ವರ ದೇವಸ್ಥಾನಕ್ಕೆ 2022ರಲ್ಲಿ ಇದರ ಹಿಂದಿನ ವರ್ಷಕ್ಕಿಂತ ಭಕ್ತರು ಉದಾರವಾಗಿ ದೇಣಿಗೆ ನೀಡಿದ್ದಾರೆ. 2021ರಲ್ಲಿ ಒಟ್ಟು 22.13 ಕೋಟಿ ರೂಪಾಯಿ ದೇಣಿಗೆ ರೂಪದಲ್ಲಿ ಸಂಗ್ರಹವಾಗಿತ್ತು. ಆದರೆ, 2022ರಲ್ಲಿ ಈ ದೇಣಿಗೆ ಎರಡು ಪಟ್ಟು ಹೆಚ್ಚಾಗಿದ್ದು, ಒಟ್ಟಾರೆ 46.51 ಕೋಟಿ ರೂಪಾಯಿ ಸಂಗ್ರಹವಾಗಿದೆ. ಅದರಲ್ಲೂ, ಶನಿವಾರ, ಭಾನುವಾರ, ಸೋಮವಾರದಂದು ಹೆಚ್ಚಿನ ದೇಣಿಗೆ ಬರುತ್ತಿದೆ.
2022ರ ಡಿಸೆಂಬರ್ 10ರಿಂದ 2023ರ ಜನವರಿ 16ರ ನಡುವಿನ ಪ್ರತಿ ಶನಿವಾರ, ಭಾನುವಾರ, ಸೋಮವಾರ ಭಕ್ತರ ಸಂಖ್ಯೆ ಅಧಿಕವಾಗಿತ್ತು. ಇದೇ ಅವಧಿಯಲ್ಲಿ ಜನವರಿ 7, 8, 9ರಂದು ವಿವಿಧ ದೇಣಿಗೆಗಳ ಮೂಲಕ 78.66 ಲಕ್ಷ ಆದಾಯ ಬಂದಿದೆ. ಅದೇ ರೀತಿ ಡಿಸೆಂಬರ್ 31ರಿಂದ ಜನವರಿ 2 ರವರೆಗೆ ಮೂರೇ ದಿನಗಳಲ್ಲಿ ಪ್ರಸಾದ ವಿತರಣೆಯಿಂದ ಗರಿಷ್ಠ 2.58 ಕೋಟಿಯಷ್ಟು ಆದಾಯ ಸಂಗ್ರಹವಾಗಿದೆ.
ಗಮನಿಸಿದ ಪ್ರಮುಖ ಎಂದರೆ, ಮಹಾಕಾಲ್ ಕಾರಿಡಾರ್ ಉದ್ಘಾಟಿಸಿದ ನಂತರದಲ್ಲಿ ಆದಾಯದಲ್ಲಿ ಭಾರಿ ಏರಿಕೆ ಕಂಡಿದೆ. ಎರಡು ವರ್ಷಗಳ ಹಿಂದಿನ ದೇಣಿಗೆ ಮತ್ತು ಕಳೆದ ಮೂರು ತಿಂಗಳಿಂದ ದೇಣಿಗೆಯಲ್ಲಿ ಸಾಕಷ್ಟು ಏರಿಕೆಯಾಗಿದ್ದು, 2022ರ ಅಕ್ಟೋಬರ್ 11ರಿಂದ ದೇಣಿಗೆಯು ಶೇ.60ರಿಂದ 70ರಷ್ಟು ಹೆಚ್ಚಾಗಿದೆ ಎಂದು ಮಹಾಕಾಲ್ ದೇವಸ್ಥಾನದ ಆಡಳಿತಾಧಿಕಾರಿ ಸಂದೀಪ್ ಸೋನಿ ತಿಳಿಸಿದ್ದಾರೆ.