ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ದೇಶಕ್ಕಾಗಿ ದೇಣಿಗೆ (Donate for Desh) ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಲ್ಲಿನ 10 ರಾಜಾಜಿ ಮಾರ್ಗದಲ್ಲಿರುವ ಖರ್ಗೆ ಅವರ ನಿವಾಸದಲ್ಲಿ ದೇಶವಾಸಿಗಳಿಂದ ನಿಧಿ ಸಂಗ್ರಹಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಖಜಾಂಚಿ ಅಜಯ್ ಮಾಕನ್, ಕಾಂಗ್ರೆಸ್ ಮುಖಂಡರಾದ ಕೆ ಸಿ ವೇಣುಗೋಪಾಲ್, ಜೈರಾಮ್ ರಮೇಶ್ ಮುಂತಾದವರು ಉಪಸ್ಥಿತರಿದ್ದರು.
ಕಾಂಗ್ರೆಸ್ನಿಂದ ನಿಧಿ ಸಂಗ್ರಹ ಅಭಿಯಾನ: ದೇಶಕ್ಕಾಗಿ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ವತಃ 1.38 ಲಕ್ಷ ರೂಪಾಯಿ ದೇಣಿಗೆ ನೀಡಿದರು. ಬಳಿಕ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಕಾಂಗ್ರೆಸ್ ಜನರಿಂದ ದೇಣಿಗೆ ನೀಡುವಂತೆ ಕೇಳುತ್ತಿದೆ. ಇದು ಕಾಂಗ್ರೆಸ್ ಪಕ್ಷಕ್ಕಾಗಿ ಅಲ್ಲ. ಇದು ದೇಶಕ್ಕಾಗಿ ಎಂದು ಹೇಳಿದರು. ದೇಣಿಗೆ ಸಂಗ್ರಹ ಅಭಿಯಾನವು ಹಿಂದುಳಿದ ಸಮುದಾಯಗಳ ಹಕ್ಕುಗಳನ್ನು ಎತ್ತಿ ಹಿಡಿಯುವ, ಸಮಾಜದಲ್ಲಿನ ಅಸಮಾನತೆ ನಿವಾರಿಸುವ, ಆಯ್ದ ಬಂಡವಾಳಶಾಹಿಗಳನ್ನು ಬೆಂಬಲಿಸುವ ನಿರಂಕುಶ ಸರ್ಕಾರವನ್ನು ವಿರೋಧಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಖಜಾಂಚಿ ಅಜಯ್ ಮಾಕನ್, ನಮ್ಮ ಈ ನಿಧಿ ಸಂಗ್ರಹ ಅಭಿಯಾನವು ಕಾಂಗ್ರೆಸ್ನ 138 ವರ್ಷಗಳ ಪ್ರಯಾಣ ಮತ್ತು ಇತಿಹಾಸವನ್ನು ನೆನಪಿಸುತ್ತದೆ. ಈ ಸಂಬಂಧ ನಾವು ನಮ್ಮ ಬೆಂಬಲಿಗರಲ್ಲಿ 138 ರೂ, ಅಥವಾ 1380 ರೂ, 13,800 ಅದಕ್ಕಿಂದ ಹೆಚ್ಚಿನ ಹಣವನ್ನು ದೇಣಿಗೆ ನೀಡುವಂತೆ ಕೋರುತ್ತೇವೆ. ಈ ಮೂಲಕ ಉತ್ತಮ ಭಾರತಕ್ಕಾಗಿ ಶ್ರಮಿಸುತ್ತೇವೆ ಎಂದು ಹೇಳಿದರು.