ಅಯೋಧ್ಯೆ:ಕೇಂದ್ರ ಸರ್ಕಾರ ರಾಮಭಕ್ತರಿಗೆ ಹೊಸ ಕೊಡುಗೆ ನೀಡಲು ನಿರ್ಧರಿಸಿದೆ. ರಾಮ್ ಲಲ್ಲಾ ಪಟ್ಟಾಭಿಷೇಕಕ್ಕೂ ಮುನ್ನವೇ ಅಯೋಧ್ಯೆಯಿಂದ ದೇಶೀಯ ವಿಮಾನ ಸಂಚಾರ ಪ್ರಾರಂಭವಾಗಲಿವೆ ಎಂಬ ಸಿಹಿ ಸುದ್ದಿ ನೀಡಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಮಾನ ನಿಲ್ದಾಣದ ರನ್‌ವೇ ಬಹುತೇಕ ಸಿದ್ಧಗೊಂಡಿದೆ. ಶೇ 70ರಷ್ಟು ಟರ್ಮಿನಲ್ನ ಕಾಮಗಾರಿ ಪೂರ್ಣಗೊಂಡಿದೆ. ಡಿಸೆಂಬರ್ ಹೊತ್ತಿಗೆ ಟರ್ಮಿನಲ್ನ ಕಾಮಗಾರಿ ಪೂರ್ಣವಾಗಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ.
ಅಯೋಧ್ಯೆಯಿಂದ ರಾಮ್ ಲಲ್ಲಾ ಪಟ್ಟಾಭಿಷೇಕಕ್ಕೂ ಮುನ್ನವೇ ದೇಶೀಯ ವಿಮಾನಗಳನ್ನು ಆರಂಭಿಸುವಂತೆ ನಿಲ್ದಾಣದಲ್ಲಿನ ಕಾರ್ಯವು ತೀವ್ರಗತಿಯಲ್ಲಿ ಸಾಗುತ್ತಿದೆ. ಭಕ್ತರಿಗಾಗಿ ಅಯೋಧ್ಯೆಯ ವಿಮಾನ ನಿಲ್ದಾಣವನ್ನು ರಾಮಮಂದಿರ ರೀತಿಯ ಮಾದರಿಯಲ್ಲೇ ನಿರ್ಮಿಸಲಾಗುತ್ತಿದೆ. ಕೇವಲ ಅಯೋಧ್ಯೆಯ ಜನರಿಗಾಗಿ ಅಲ್ಲದೇ, ಜಗತ್ತಿನಾದ್ಯಂತ ಇರುವ ರಾಮ ಭಕ್ತರ ಪ್ರಯೋಜನಕ್ಕಾಗಿ ಸಾಕಷ್ಟು ಕಾರ್ಯಗಳು ಭರದಿಂದ ನಡೆಯುತ್ತಿವೆ.
ರಾಮನ ಪ್ರಾಣ ಪ್ರತಿಷ್ಠಾ ಮಹೋತ್ಸವಕ್ಕೂ ಮೊದಲೇ ಈ ಕೆಲಸ ಪ್ರಾರಂಭವಾಗಲಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿರುವ ಅಯೋಧ್ಯೆಯ ಶ್ರೀರಾಮ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲರೂ ನಾವು ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನ ನಗರವಾದ ಅಯೋಧ್ಯೆಗೆ ಬಂದಿದ್ದೇವೆ ಎಂಬ ಭಾವ ಮೂಡಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್ ಕುಮಾರ್ ಹೇಳಿದ್ದಾರೆ.
ಅಲ್ಲದೆ ದಿನದ 24 ಗಂಟೆಯೂ ವಿಮಾನ ನಿಲ್ದಾಣ ಕಾರ್ಯ ನಿರ್ವಹಿಸಲಿದೆ. ಈ ನಿಲ್ದಾಣ 250 ಪ್ರಯಾಣಿಕರ ಆಗಮನ ಮತ್ತು 250 ಪ್ರಯಾಣಿಕರ ನಿರ್ಗಮಕ್ಕಾಗಿ ಒಟ್ಟು 500 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರಲಿದೆ. ಅಂತರರಾಷ್ಟ್ರೀಯ ಮಟ್ಟದ ಎಲ್ಲಾ ಸೌಲಭ್ಯಗಳೂ ಪ್ರಯಾಣಿಕರಿಗೆ ದೊರಕಲಿವೆ. ನಿಲ್ದಾಣ ನಿರ್ಮಾಣದಿಂದಾಗಿ ಅಕ್ಕಪಕ್ಕದ ಭೂಮಿಯ ಮೌಲ್ಯ ಹೆಚ್ಚಾಗಿದೆ. ಬರುವ ಪ್ರವಾಸಿಗರಿಗೆ ವಸತಿ ಒದಗಿಸುವ ಹೋಟೆಲ್ಗಳು ಉತ್ತಮ ಲಾಭ ಗಳಿಸುತ್ತಿವೆ.
ಸಂವಹನ ಸಾಧನಗಳ ಮಾಪನಾಂಕ ನಿರ್ಣಯವೂ ಯಶಸ್ವಿಯಾಗಿ ಪೂರ್ಣಗೊಂಡಿದೆ. ವಿಮಾನ ನಿಲ್ದಾಣ ನಿರ್ಮಾಣದಿಂದ ಅಯೋಧ್ಯೆಯ ಜನರಲ್ಲಿ ಉತ್ಸಾಹ ಮೂಡಿದೆ. ಈ ವರ್ಷ ವಿಮಾನ ನಿಲ್ದಾಣವನ್ನು ಸಾರ್ವಜನಿಕರಿಗೆ ಸಮರ್ಪಿಸಲಾಗುವುದು ಎಂದು ನಿಲ್ದಾಣದ ನಿರ್ದೇಶಕ ವಿನೋದ್ ಕುಮಾರ್ ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದ ಹಿಂದೂಗಳಿಗೂ ಆಹ್ವಾನ: ಶ್ರೀರಾಮ ಜನ್ಮಭೂಮಿ ನಿರ್ಮಾಣ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, "ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನಾ ದಿನದಂದು ಪಾಕಿಸ್ತಾನದ ಹಿಂದೂಗಳನ್ನು ಆಹ್ವಾನಿಸಲಾಗುವುದು" ಎಂದು ಜೂನ್ನಲ್ಲಿ ತಿಳಿಸಿದ್ದರು. "ರಾಮಮಂದಿರದಲ್ಲಿ ವಿಗ್ರಹಗಳ ಪ್ರತಿಷ್ಠಾಪನೆಯು ಡಿಸೆಂಬರ್-ಜನವರಿಯಲ್ಲಿ ನಡೆಯಲಿದೆ. ರಾಮ ಮಂದಿರ ಉದ್ಘಾಟನೆ ವೇಳೆ ಅಯೋಧ್ಯೆ ರಾಮಭಕ್ತರಿಂದ ತುಂಬಿ ತುಳುಕಲಿದೆ. ರಾಮಮಂದಿರದ ಉದ್ಘಾಟನೆಯನ್ನು ವೀಕ್ಷಿಸಲು ಪ್ರಪಂಚದಾದ್ಯಂತದ ಜನರು ಸೇರುತ್ತಾರೆ. ಅಲ್ಲದೆ, ಪಾಕಿಸ್ತಾನದಿಂದಲೂ ಹಿಂದೂಗಳನ್ನು ಕರೆಸಲಾಗುವುದು. ಅಯೋಧ್ಯೆಯ ಈ ರಾಮ ಮಂದಿರ ದೇಶದ ಗೌರವದ ಪ್ರತೀಕವಾಗಿದೆ" ಎಂದಿದ್ದರು.
ಇದನ್ನೂ ಓದಿ:Ram Mandir: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಪಾಕಿಸ್ತಾನದ ಹಿಂದೂಗಳಿಗೂ ಆಹ್ವಾನ; ನವೆಂಬರ್‌ನಿಂದ ವಿದೇಶಿ ದೇಣಿಗೆಗೆ ಅವಕಾಶ ಸಾಧ್ಯತೆ