ಸುಲ್ತಾನ್‌ಪುರ(ಉತ್ತರ ಪ್ರದೇಶ):ನಿಷ್ಠಾವಂತ ಶ್ವಾನವೊಂದು ತನ್ನ ಮಾಲೀಕನ ಜೀವ ಉಳಿಸಿದೆ. ಗಲಾಟೆವೊಂದರಲ್ಲಿ ವ್ಯಕ್ತಿಯೋರ್ವ ಗುಂಡಿನ ದಾಳಿ ನಡೆಸಿದಾಗ ಶ್ವಾನ ಅಡ್ಡ ಬಂದು ತನ್ನ ಮಾಲೀಕನ ಜೀವ ಉಳಿಸಿ ಪ್ರಾಣಬಿಟ್ಟಿರುವ ಮನಕಲಕುವ ಘಟನೆ ಸುಲ್ತಾನ್ಪುರ್ ಜಿಲ್ಲೆಯ ವಿಕ್ವಜಿತ್‌ಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ವಿಶಾಲ್ ಶ್ರೀವಾಸ್ತವ್ ಅಲಿಯಾಸ್ ಶನಿ ಕಳೆದ ಹಲವು ವರ್ಷಗಳಿಂದ ಗ್ರಾಮದಲ್ಲಿ ಗೋಶಾಲೆ ನಡೆಸುತ್ತಿದ್ದಾರೆ. ಭಾನುವಾರ ಗೋಶಾಲೆಯ ಆವರಣದಲ್ಲಿಯೇ ಹುಲ್ಲು ಇಡಲು ಕೊಟ್ಟಿಗೆ ನಿರ್ಮಿಸುತ್ತಿದ್ದರು. ಈ ವೇಳೆ ಪಕ್ಕದ ರಾಂಬರಣ್ ವರ್ಮಾ ಪಿಜಿ ಕಾಲೇಜಿನ ಮ್ಯಾನೇಜರ್ ಅನಿಲ್ ವರ್ಮಾ ತನ್ನ ಚಾಲಕನೊಂದಿಗೆ ಕೊಟ್ಟಿಗೆಯೊಳಗೆ ನುಗ್ಗಿದ್ದಾರೆ. ಬಳಿಕ ಕೊಟ್ಟಿಗೆ ನಿರ್ಮಾಣ ಮಾಡದಂತೆ ವಿಶಾಲ್ಗೆ ಅನಿಲ್ ಧಮ್ಕಿ ಹಾಕಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಕಲಹ ಉಂಟಾಗಿದೆ. ಇವರ ಜಗಳ ನೋಡು-ನೋಡುತ್ತಿದ್ದಂತೆ ವಿಕೋಪಕ್ಕೆ ತಿರುಗಿದೆ. ಕೋಪಗೊಂಡ ಅನಿಲ್ ವರ್ಮಾ ತನ್ನ ಬಳಿ ಇರುವ ಪರವಾನಿಗೆ ಪಡೆದ ಗನ್ನಿಂದ ವಿಶಾಲ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.