ಕೋಲ್ಕತ್ತಾ (ಪಶ್ಚಿಮ ಬಂಗಾಳ):ಐದು ತಿಂಗಳ ಮಗುವಿನ ಶ್ವಾಸನಾಳದಲ್ಲಿ ಸಿಲುಕಿದ್ದ ಸೇಫ್ಟಿ ಪಿನ್ಅನ್ನು ಶಸ್ತ್ರಚಿಕಿತ್ಸೆ ಮೂಲಕ ಪಶ್ಚಿಮ ಬಂಗಾಳದ ಕೊಲ್ಕತ್ತಾ ವೈದ್ಯಕೀಯ ಕಾಲೇಜಿನ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಆಕಸ್ಮಿಕವಾಗಿ ಮಗು ಪಿನ್ ನುಂಗಿತ್ತು. 40 ನಿಮಿಷದ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನೆರವೇರಿಸಿ ಹೊರತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಹೂಗ್ಲಿ ಜಿಲ್ಲೆಯ ಜಂಗಿಪಾರಾ ಗ್ರಾಮದ ಗಂಡು ಮಗು ಐದು ದಿನಗಳ ಹಿಂದೆ ಅಚಾನಕ್ ಆಗಿ ಪಿನ್ ನುಂಗಿತ್ತು. ಇದರಿಂದ ಉಸಿರಾಟದ ತೊಂದರೆ ಉಂಟಾಗಿದೆ. ಪೋಷಕರು ಸಮೀಪದ ವೈದ್ಯರ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಶಿಶುವಿಗೆ ಶೀತಬಾಧೆ ಉಂಟಾಗಿದೆ ಎಂಬ ಊಹಿಸಿ, ಅದಕ್ಕನುಗುಣವಾಗಿ ಚಿಕಿತ್ಸೆ ನೀಡಲು ಪ್ರಾರಂಭಿಸಿದ್ದಾರೆ. ಆದರೆ, ಮಗುವಿನ ಆರೋಗ್ಯ ಪರಿಸ್ಥಿತಿ ತೀರಾ ಹದಗೆಡಲು ಶುರುವಾಗಿದೆ. ನಿರಂತರವಾಗಿ ಜೊಲ್ಲು ಸುರಿಸಲಾರಂಭಿಸಿದೆ. ಪುಟ್ಟ ಕಂದ ಹಸಿವನ್ನೂ ಕಳೆದುಕೊಂಡಿತ್ತು.
ಬಾಯ್ತೆರೆದ ಪಿನ್ನ ಚುಪಾದ ತುದಿ!:ಮಗುವಿನ ಪರಿಸ್ಥಿತಿಯಿಂದ ಆತಂಕಗೊಂಡ ಕುಟುಂಬಸ್ಥರು ಗುರುವಾರ ಮಧ್ಯಾಹ್ನ ಕೊಲ್ಕತ್ತಾ ವೈದ್ಯಕೀಯ ಕಾಲೇಜಿಗೆ ಸೇರಿಸಿದ್ದಾರೆ. ಇಎನ್‌ಟಿ ವಿಭಾಗದ ವೈದ್ಯ ಸುದೀಪ್ ದಾಸ್ ಹಾಗೂ ಇತರೆ ವೈದ್ಯರು ಎಕ್ಸ್-ರೇ ಮಾಡಿದಾಗ ಶ್ವಾಸನಾಳದಲ್ಲಿ ಉದ್ದನೆಯ ಸೇಫ್ಟಿ ಪಿನ್ ಸಿಲುಕಿರುವುದು ಗೊತ್ತಾಗಿದೆ. ಫಿನ್ನ ಚುಪಾದ ಒಂದು ತುದಿ ಬಾಯ್ತೆರೆದುಕೊಂಡಿರುವುದನ್ನೂ ಕಂಡುಕೊಂಡಿದ್ದಾರೆ. ಹೀಗಾಗಿ ಮಗುವಿಗೆ ಆಪರೇಷನ್ ಮಾಡಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ.