ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕೋಲ್ಕತ್ತಾದ ಸರ್ಕಾರಿ ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸಾ ಮೂಲಕ 18 ದಿನಗಳ ಸಯಾಮಿ ಅವಳಿ ಮಕ್ಕಳನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಇಬ್ಬರೂ ಮಕ್ಕಳು ಆರೋಗ್ಯವಾಗಿದ್ದರೂ, ಮುಂದಿನ ಮೂರ್ನಾಲ್ಕು ದಿನಗಳು ಅವರಿಗೆ ನಿರ್ಣಾಯಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ದಕ್ಷಿಣ ದಿನಾಜ್‌ಪುರದ ನಿವಾಸಿಯೊಬ್ಬರ ಮಕ್ಕಳು ಇವರಾಗಿದ್ದಾರೆ. ಈ ಅವಳಿ ಮಕ್ಕಳ ಯಕೃತ್ತಿನ ಜೊತೆಗೆ ಹೃದಯ ಸಹ ಸೇರಿಕೊಂಡಿತ್ತು. ಅದೃಷ್ಟವಶಾತ್ ಅವರಿಬ್ಬರಿಗೂ ಪ್ರತ್ಯೇಕ ಹೃದಯವಿತ್ತು. ಒಂದೇ ಹೃದಯವಿದ್ದರೆ ಬೇರ್ಪಡಿಸುವುದು ಕಷ್ಟವಾಗುತ್ತಿತ್ತು ಎಂದು ವೈದ್ಯಕೀಯ ಕಾಲೇಜಿನ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಕೌಸಿಕ್ ಸಹಾ ಹೇಳಿದ್ದಾರೆ.