ಸಂಬಲ್ಪುರ/ಒಡಿಶಾ:'ವೈದ್ಯೋ ನಾರಾಯಣೋ ಹರಿ:' ಅನ್ನೋ ಮಾತು ಕೆಲವು ವೈದ್ಯರನ್ನು ನೋಡಿದಾಗ ಖಂಡಿತವಾಗಿಯೂ ನಿಜ ಅನಿಸುತ್ತೆ. ಯಾಕಂದ್ರೆ ವೃತ್ತಿಬದ್ಧತೆಗಿಂತ ಹಣ ಸಂಪಾದನೆಯನ್ನೇ ಗುರಿಯಾಗಿರಿಸಿಕೊಂಡು ಡಾಕ್ಟರ್ ವೃತ್ತಿ ಆಯ್ಕೆ ಮಾಡಿಕೊಳ್ಳುವ ಹಲವರ ನಡುವೆಯೇ ಜನಸೇವೆಗೆಂದೇ ಕೆಲವರು ವೈದ್ಯರಾಗಿದ್ದಾರೆ. ಅಂತವರಲ್ಲಿ ಒಡಿಶಾದ ಒಂದು ರೂಪಾಯಿ ಡಾಕ್ಟರ್ ರಾಮ್‌ಚಂದಾನಿ ಸಹ ಒಬ್ಬರು.
ಒಡಿಶಾದ ಬುರ್ಲಾ ಭೀಮ್ಸರ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಮ್‌ಚಂದಾನಿ ಅವರು ತಾವು ವಾಸವಿರುವ ಬಾಡಿಗೆ ಮನೆಯ ಪಕ್ಕದಲ್ಲೇ ಕ್ಲಿನಿಕ್ ಒಂದನ್ನು ತೆರೆದಿದ್ದಾರೆ. ಇಲ್ಲಿಗೆ ಬರುವ ರೋಗಿಗಳಿಗೆ ಕೇವಲ ಒಂದು ರೂಪಾಯಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತಮ್ಮ ಡ್ಯೂಟಿ ಮುಗಿಸಿ ಸಂಜೆ 6 ರಿಂದ 7 ಗಂಟೆವರೆಗೆ ಈ ಕ್ಲಿನಿಕ್ಗೆ ಬರುವ ಬಡರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಇವರ ಪತ್ನಿ ಸಹ ದಂತವೈದ್ಯೆಯಾಗಿದ್ದು, ಅವರು ಸಹ ರಾಮ್‌ಚಂದಾನಿ ಅವರಿಗೆ ನೆರವಾಗುತ್ತಾರೆ.