ಹೈದರಾಬಾದ್: ಕೊರೊನಾ ಲಸಿಕೆಗೆ ಸಂಬಂಧಪಟ್ಟ ಆಯಿಲ್ ನೀಡುವುದಾಗಿ ಅನಿವಾಸಿ ಭಾರತೀಯ ವೈದ್ಯರೊಬ್ಬರಿಗೆ ಬರೋಬ್ಬರಿ 11. 80 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣ ಹೈದರಾಬಾದ್ನಲ್ಲಿ ನಡೆದಿದ್ದು, ಇದೀಗ ಅಮೆರಿಕ ಎಫ್ಬಿಐ ತನಿಖೆ ನಡೆಸುತ್ತಿದೆ.
ಅಮೆರಿಕದಲ್ಲಿ ಮೆಡಿಕಲ್ ಯೂನಿವರ್ಸಿಟಿ ನಡೆಸುತ್ತಿರುವ ಭಾರತೀಯ ಮೂಲದ ವೈದ್ಯ ಡಾ.ಚಂದ್ರಶೇಖರ್ ಅವರಿಗೆ ನೈಜೀರಿಯನ್ ಪ್ರಜೆಗಳು ಆನ್ಲೈನ್ನಲ್ಲಿ ವಂಚಿಸಿದ್ದಾರೆ. ನೈಜೀರಿಯನ್ನರು ಹಣ ಲೂಟಿ ಮಾಡಿದ ಬ್ಯಾಂಕ್ ಖಾತೆಗಳು ಬ್ಯಾಂಕ್ ಆಫ್ ಅಮೆರಿಕಗೆ ಸೇರಿದ್ದವು ಎಂಬ ಅಂಶ ಗೊತ್ತಾಗುತ್ತಿದ್ದಂತೆ ತನಿಖಾ ಸಂಸ್ಥೆ ಎಫ್ಬಿಐ ತ್ವರಿತವಾಗಿ ತನಿಖೆ ಕೈಗೊಂಡಿತ್ತು.
ಅಲ್ಲದೇ ದುಬೈ ಮತ್ತು ಅಮೆರಿಕದಲ್ಲಿರುವ ಅವರ ಬ್ಯಾಂಕ್ ಖಾತೆಯಲ್ಲಿನ 1.80 ಕೋಟಿ ರೂಪಾಯಿ ವಹಿವಾಟು ಮಾಡದಂತೆ ತಡೆಹಿಡಿಯಲಾಗಿತ್ತು. ನೈಜೀರಿಯನ್ ಆನ್ಲೈನ್ ಕ್ರಿಮಿನಲ್ಗಳು ಬಳಸಿದ್ದ ಇ-ಮೇಲ್ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ಐಪಿ ವಿಳಾಸವನ್ನ ಗುರುತಿಸಿದ್ದಾರೆ.
ಡಾ. ಚಂದ್ರಶೇಖರ್ ಅವರ ಕುಟುಂಬವು ಅಮೆರಿಕದ ಸೇಂಟ್ ಲೂಸಿಯಾನಾದಲ್ಲಿ ವೈದ್ಯಕೀಯ ವಿಶ್ವವಿದ್ಯಾಲಯ ನಡೆಸುತ್ತಿದೆ. ಹೈದರಾಬಾದ್ನಲ್ಲಿ ಅವರು ಸ್ವಂತ ಮನೆ ಹೊಂದಿದ್ದು, ವರ್ಷಕ್ಕೊಮ್ಮೆ ಬಂದು ಹೋಗುತ್ತಾರೆ. ಈ ವರ್ಷದ ಮಾರ್ಚ್ನಲ್ಲಿ ಮೂವರು ನೈಜೀರಿಯನ್ನರು ಡಾ.ಚಂದ್ರಶೇಖರ್ ಅವರನ್ನು ಫೇಸ್ಬುಕ್ ಮೂಲಕ ಪರಿಚಯಿಸಿದ್ದರು.
ತೆರಿಗೆ ಕಟ್ಟಲು 2.5 ಮಿಲಿಯನ್ ಅಮೆರಿಕನ್ ಡಾಲರ್ಗೆ ಬೇಡಿಕೆ
ಪ್ರಾಣಿಗಳಿಗೆ ನೀಡುವ ಕೊರೊನಾ ಲಸಿಕೆಗಳಿಗೆ ಅಗತ್ಯವಿರುವ ಕಚ್ಚಾ ತೈಲವು ಭಾರತದಲ್ಲಿ ಲಭ್ಯವಿದೆ ಮತ್ತು ಲಂಡನ್‌ನ ಪ್ರಮುಖ ಫಾರ್ಮಾ ಕಂಪನಿಗಳು ಅದನ್ನು ಖರೀದಿಸಲು ಸಿದ್ಧವಾಗಿವೆ ಎಂದು ಗೀತಾ ನಾರಾಯಣ್ ಎಂಬ ಹೆಸರಿನ ಸಂಶೋಧನಾ ವಿದ್ಯಾರ್ಥಿ ಎಂದು ಹೇಳಿಕೊಳ್ಳುವ ನೈಜೀರಿಯನ್, ಪರಿಚಯ ಮಾಡಿಕೊಂಡಿದ್ದಳು.
ಅವರೊಂದಿಗೆ ಮಾತನಾಡಿ, ಲಂಡನ್‌ನಲ್ಲಿರುವ ಕಂಪನಿಗಳ ಹೆಸರನ್ನು ಉಲ್ಲೇಖಿಸಿ, ನಾಲ್ಕು ತಿಂಗಳ ಹಿಂದೆ ಆಯಿಲ್ ಮತ್ತು ಲಸಿಕೆಗಳ ಹೆಸರಿನಲ್ಲಿ ಡಾ.ಚಂದ್ರಶೇಖರ್ ಅವರಿಂದ 11.80 ಕೋಟಿ ರೂ. ಪಡೆದಿದ್ದರು. ಬಳಿಕ ಎರಡನೇ ನೈಜೀರಿಯನ್ ಬೆಂಜಮಿನ್ ತೈಲವನ್ನ ಖರೀದಿಸುವ ಫಾರ್ಮಾಸುಟಿಕಲ್ ಕಂಪನಿ ನಾರ್ಮಂಜ್ ಪ್ಯಾರಾಮೆಡಿಕಲ್ಸ್ ಲಿಮಿಟೆಡ್‌ನ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದ. ಇವರ ಜೊತೆ ಮೂರನೇ ವ್ಯಕ್ತಿ ನೈಜೀರಿಯನ್ ಲಕ್ಷ್ಮಿ ಎಂದು ಮಹಾರಾಷ್ಟ್ರದ ರಾಯಗಡದಲ್ಲಿ ತೈಲ ತಯಾರಿಸುವುದಾಗಿ ಪರಿಚಯ ಮಾಡಿಕೊಂಡಿದ್ದರು.
ಆದರೆ, ಮಹಾರಾಷ್ಟ್ರದಿಂದ ಆಯಿಲ್ ಸಮುದ್ರ ಮಾರ್ಗವಾಗಿ ಲಂಡನ್ಗೆ ಸಾಗಿಸಲಾಗಿದೆ ಎಂದು ನಂಬಿಸಿದ್ದರು. ಜೊತೆಗೆ 2.5 ಮಿಲಿಯನ್ ಯುಎಸ್ ಡಾಲರ್ ತೆರಿಗೆ ರೂಪದಲ್ಲಿ ಪಾವತಿಸುವಂತೆ ನೈಜೀರಿಯನ್ ಖದೀಮರು ವೈದ್ಯರ ಮೇಲೆ ಒತ್ತಡ ಹಾಕುತ್ತಿದ್ದರು. ಇದರಿಂದ ಅನುಮಾನಗೊಂಡ ಅವರು ಲಂಡನ್ ಬಂದರಿನಲ್ಲಿದ್ದ ಸ್ನೇಹಿತರ ಸಂಪರ್ಕಿಸಿ ಲಸಿಕೆ ತುಂಬಿದ ಬಾಟಲಿಗಳ ಕುರಿತು ಪ್ರಶ್ನಿಸಿದಾಗ ಸತ್ಯಾಂಶ ಬಯಲಾಗಿತ್ತು.
ಲಂಡನ್ ಬಂದರಿಗೆ ಯಾವುದೇ ಲಸಿಕೆ ತುಂಬಿದ ಬಾಟಲಿಗಳಾಗಲಿ, ಕಚ್ಚಾ ವಸ್ತುವಾಗಲಿ ಬಂದಿರಲಿಲ್ಲ. ತಕ್ಷಣ ಅವರು ಹೈದರಾಬಾದ್ನ ಸೈಬರ್ ಕ್ರೈಂ ಪೊಲೀಸರ ಬಳಿ ದೂರು ನೀಡಿದ್ದರಲ್ಲದೇ. ಅಮೆರಿಕದಲ್ಲೂ ದೂರು ನೀಡಿದ್ದಾರೆ.
ದೂರಿನ ಸಂಬಂಧ ತನಿಖೆ ಮುಂದುವರಿದಿದ್ದು, ಆರೋಪಿಗಳು ದುಬೈನಲ್ಲಿ ಕುಳಿತು ಈ ರೀತಿ ವಂಚಿಸಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಅವರ ಐಪಿ ವಿಳಾಸದ ಮೂಲಕ ಪತ್ತೆ ಕಾರ್ಯ ನಡೆಸಲಾಗುತ್ತಿದೆ.
ಇದನ್ನೂ ಓದಿ:ವಿವಾಹವಾಗಬೇಕಿದ್ದ ರಾಷ್ಟ್ರೀಯ ಶೂಟರ್ ಕೊನಿಕಾ ಲಯಕೀಸ್ ಶವವಾಗಿ ಪತ್ತೆ