ನಾಗೌರ್(ರಾಜಸ್ಥಾನ): ಕುಡಿದ ಅಮಲಿನಲ್ಲಿ ಸರ್ಕಾರಿ ವೈದ್ಯರೊಬ್ಬರು ಮೂವರ ಮೇಲೆ ಕಾರು ಹರಿಸಿರುವ ಘಟನೆ ನಾಗೌರ್ ಜಿಲ್ಲೆಯ ಜೆಎಲ್‌ಎನ್ ಆಸ್ಪತ್ರೆಯಲ್ಲಿ ನಡೆದಿದೆ. ಇಲ್ಲಿನ ವೈದ್ಯರೋರ್ವರು ಕಾರಿನಲ್ಲಿ ಇಂದು ಬೆಳಗ್ಗೆ ಕರ್ತವ್ಯಕ್ಕೆ ಆಗಮಿಸುತ್ತಿದ್ದಾಗ ಆಸ್ಪತ್ರೆ ಆವರಣದಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಘಟನೆಯಲ್ಲಿ ಖಾಸಗಿ ಆಂಬ್ಯುಲೆನ್ಸ್ ಸಂಪೂರ್ಣ ಹಾನಿಯಾಗಿದೆ.
ಘಟನೆ ವಿವರ: ಡಾ. ವೈ.ಎಸ್. ನೇಗಿ ಎಂಬವರು ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ನಾಗೌರ್‌ನಲ್ಲಿರುವ ಜೆಎಲ್‌ಎನ್ ಆಸ್ಪತ್ರೆಗೆ ಬರುತ್ತಿದ್ದರು. ಈ ವೇಳೆ ಆಸ್ಪತ್ರೆಗೆ ಬರುತ್ತಿದ್ದಂತೆ ಕಾರು ಮೂವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಚೇನಾರ್ ನಿವಾಸಿ ಭನ್ವರಲಾಲ್ ಮೇಘವಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೊತೆಗೆ ನಾಗವಾರ ನಿವಾಸಿ ನಜ್ಮಾ ತೀವ್ರವಾಗಿ ಗಾಯಗೊಂಡಿದ್ದು, ಮತ್ತೊಬ್ಬ ಮಹಿಳೆಗೂ ಗಂಭೀರ ಗಾಯಗಳಾಗಿವೆ.
ಬಳಿಕ ವೈದ್ಯರ ಕಾರು ಆಸ್ಪತ್ರೆ ಆವರಣದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಆಸ್ಪತ್ರೆ ಸಿಬ್ಬಂದಿ ವೈದ್ಯರನ್ನು ಆಸ್ಪತ್ರೆಯೊಳಗೆ ಕರೆದೊಯ್ದು ಹಿಂಬಾಗಿಲಿನಿಂದ ಪರಾರಿಯಾಗುವಂತೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಗರ್ಭಿಣಿಗೆ ಗಂಭೀರ ಗಾಯ : ಅಪಘಾತದಲ್ಲಿ ನಜ್ಮಾ ಎಂಬವರು ಗಂಭೀರ ಗಾಯಗೊಂಡಿದ್ದರು. ಗರ್ಭಿಣಿಯಾಗಿದ್ದ ನಜ್ಮಾ ವೈದ್ಯರಲ್ಲಿ ತಪಾಸಣೆ ಮಾಡಿಕೊಳ್ಳಲೆಂದು ಆಸ್ಪತ್ರೆಗೆ ಬರುತ್ತಿದ್ದರು. ಈ ವೇಳೆ ವೈದ್ಯರ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ನಜ್ಮಾ ಗಾಳಿಯಲ್ಲಿ ಹಾರಿ ಬಿದ್ದಿದ್ದಾರೆ. ಗಾಯಗೊಂಡಿರುವ ನಜ್ಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.
ಜಬಲ್ಪುರ(ಮಧ್ಯಪ್ರದೇಶ) :ದೆಹಲಿ ಕಾರು ಅಪಘಾತದ ರೀತಿಯ ರಸ್ತೆ ಅಪಘಾತ ಜಬಲ್ಪುರ್ನಲ್ಲಿ ನಡೆದಿದೆ. ವೇಗವಾಗಿ ಬಂದ ಟ್ರಕ್ ಬೈಕ್‌ಗೆ ಡಿಕ್ಕಿ ಹೊಡೆದು ಯುವತಿಯನ್ನು ಎಳೆದೊಯ್ದಿರುವ ಘಟನೆ ಜಬಲ್‌ಪುರದ ಗಧಾ ಪೊಲೀಸ್ ಠಾಣಾ ವ್ಯಾಪ್ತಿಯ ಅಂಧ್‌ಮುಖ್ ಬೈಪಾಸ್‌ನಲ್ಲಿ ನಡೆದಿದೆ. ಲಾರಿ ಡಿಕ್ಕಿಯಾದ ರಭಸಕ್ಕೆ ಬೈಕ್ ಚಲಾಯಿಸುತ್ತಿದ್ದ ಯುವಕ ದೂರ ಹೋಗಿ ಬಿದ್ದಿದ್ದು, ಬೈಕ್ ನ ಹಿಂದೆ ಕುಳಿತಿದ್ದ ವೈದ್ಯಕೀಯ ವಿದ್ಯಾರ್ಥಿನಿ ಲಾರಿಯ ಅಡಿಗೆ ಸಿಲುಕಿ ಸಾವನ್ನಪ್ಪಿದ್ದಾಳೆ.