ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ಪ್ರಿಯದರ್ಶಿ ರಾಯ್ಬರೇಲಿ(ಉತ್ತರ ಪ್ರದೇಶ): ನೇತ್ರ ಶಸ್ತ್ರಚಿಕಿತ್ಸಕರೊಬ್ಬರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯ್ಬರೇಲಿಯ ಲಾಲ್‌ಗಂಜ್‌ನಲ್ಲಿ ನಡೆದಿದೆ. ಡಾ.ಅರುಣ್ ಸಿಂಗ್, ಪತ್ನಿ ಅರ್ಚನಾ ಸಿಂಗ್, ಪುತ್ರಿ ಆದಿವಾ ಮತ್ತು ಪುತ್ರ ಆರವ್ ಮೃತರು. ತಾವು ವಾಸವಿದ್ದ ಸರ್ಕಾರಿ ವಸತಿ ಸಮುಚ್ಚಯದಲ್ಲಿ ನಾಲ್ವರ ಮೃತದೇಹಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ತೆರಳಿದಾಗ ಮನೆ ಬಾಗಿಲು ಹಾಕಿತ್ತು. ಬಾಗಿಲು ಮುರಿದು ಒಳಹೋದಾಗ ಶವಗಳು ಪತ್ತೆಯಾಗಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಫೊರೆನ್ಸಿಕ್ ತಂಡ ಸಾಕ್ಷ್ಯ ಕಲೆ ಹಾಕುತ್ತಿದೆ. ಅರುಣ್ ಸಿಂಗ್ ಲಾಲ್‌ಗಂಜ್‌ನಲ್ಲಿರುವ ರೈಲ್ವೆ ಕೋಚ್ ಫ್ಯಾಕ್ಟರಿಯಲ್ಲಿ ನೇತ್ರ ಶಸ್ತ್ರಚಿಕಿತ್ಸಕರಾಗಿ ಕೆಲಸ ಮಾಡುತ್ತಿದ್ದರು" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ಪ್ರಿಯದರ್ಶಿ ಮಾಹಿತಿ ನೀಡಿದರು.
"ಮೊದಲು ಚುಚ್ಚುಮದ್ದು ನೀಡುವ ಮೂಲಕ ಹೆಂಡತಿ ಮತ್ತು ಮಕ್ಕಳನ್ನು ಪ್ರಜ್ಞಾಹೀನಗೊಳಿಸಿ ನಂತರ ಕೊಲೆ ಮಾಡಿರುವ ಶಂಕೆ ಇದೆ. ಬಳಿಕ ತಾವೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಶವಗಳನ್ನು ಪೊಲೀಸರು ಬಾಗಿಲು ಒಡೆದು ಹೊರತೆಗೆದಿದ್ದಾರೆ. ಪತ್ನಿ, ಮಗ ಮತ್ತು ಮಗಳ ಮೃತ ದೇಹಗಳು ಹಾಸಿಗೆಯಲ್ಲಿ ಪತ್ತೆಯಾಗಿವೆ. ಮತ್ತೊಂದು ಜಾಗದಲ್ಲಿ ಅರುಣ್ ಸಿಂಗ್ ಶವ ದೊರೆತಿದೆ" ಎಂದು ಅವರು ಹೇಳಿದರು.
"2017ರಲ್ಲಿ ಡಾ.ಅರುಣ್ ಸಿಂಗ್ ಡಿಎಂಒ ಆಗಿದ್ದರು. ಇವರ ಕುಟುಂಬ ಕಾರ್ಖಾನೆಯ ವಸತಿ ಆವರಣದಲ್ಲಿ ವಾಸಿಸುತ್ತಿತ್ತು. ಸಿಂಗ್ ಅವರು ಭಾನುವಾರ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಇಂದು ಅವರನ್ನು ಹುಡುಕಿಕೊಂಡು ಸಹೋದ್ಯೋಗಿಗಳು ನಿವಾಸಕ್ಕೆ ಆಗಮಿಸಿದಾಗ ಮನೆಗೆ ಬೀಗ ಹಾಕಿರುವುದು ಕಂಡುಬಂದಿತ್ತು. ಮನೆಯೊಳಗೆ ಇಣುಕಿ ನೋಡಿದಾಗ ಶವಗಳು ಪತ್ತೆಯಾಗಿದ್ದವು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ ನಡೆಯುತ್ತಿದೆ" ಎಂದು ಅಲೋಕ್ ಪ್ರಿಯದರ್ಶಿ ತಿಳಿಸಿದ್ದಾರೆ.
ಇದನ್ನೂ ಓದಿ:ಎಂಎಲ್ಸಿ ಸಿ ಪಿ ಯೋಗೇಶ್ವರ್ ಬಾವ ಶವವಾಗಿ ಪತ್ತೆ: ಕೊಲೆ ಶಂಕೆ