ಕರ್ನಾಟಕ

karnataka

ಸಂಸತ್ತಿನ ಸಂದರ್ಶಕರ ಪಾಸ್‌ಗಳನ್ನು ಪಡೆದುಕೊಳ್ಳುವ ಪ್ರಕ್ರಿಯೆ ಹೇಗಿದೆ ಗೊತ್ತಾ?

By ETV Bharat Karnataka Team

Published : Dec 13, 2023, 10:38 PM IST

Updated : Dec 13, 2023, 10:50 PM IST

ಸಂದರ್ಶಕರ ಪಾಸ್ ಅನ್ನು ಪಡೆಯುವವರು ಮೊದಲು ಡಿಜಿಟಲ್​ ಸಂಸದ್ ವೆಬ್‌ಸೈಟ್ ಮೂಲಕ ನೋಂದಾಯಿಸಿಕೊಳ್ಳಬೇಕು.

ಸಂಸತ್ತಿನ ಸಂದರ್ಶಕರ ಪಾಸ್‌
ಸಂಸತ್ತಿನ ಸಂದರ್ಶಕರ ಪಾಸ್‌

ನವದೆಹಲಿ :ಹೊಸ ಸಂಸತ್ತು ಭವನದಲ್ಲಿ ನಡೆಯುತ್ತಿದ್ದ ಕಲಾಪದ ವೇಳೆ ಉಂಟಾದ ಭದ್ರತಾ ಲೋಪವು ದೇಶದಲ್ಲೆಡೆ ಭಾರೀ ಸಂಚಲನ ಮೂಡಿಸಿದೆ. ಈ ಘಟನೆಯಿಂದಾಗಿ ಸಂಸತ್ತಿನ ಭದ್ರತಾ ವ್ಯವಸ್ಥೆ ಮತ್ತು ಸಂಸದರಿಂದ ಸಂದರ್ಶಕರ ಹೇಗೆ ಪಾಸ್‌ಗಳನ್ನು ಪಡೆದುಕೊಳ್ಳುತ್ತಾರೆ ಎಂಬ ಕಾರ್ಯವಿಧಾನಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳು ಹುಟ್ಟುಕೊಂಡಿವೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಲಾಪ ನಡೆಯುವ ವೇಳೆ ಸಾರ್ವಜನಿಕ ಗ್ಯಾಲರಿಯಿಂದ ಯುವಕನೊಬ್ಬ ಸದನದೊಳಗೆ ನುಗ್ಗಿ ಹಳದಿ ಬಣ್ಣದ ಸ್ಮೋಕ್​ ಕ್ರ್ಯಾಕರ್​ವೊಂದನ್ನು ಸ್ಪ್ರೇ ಮಾಡಿದ್ದಾನೆ. ಇನ್ನೊಬ್ಬ ಯುವಕ ಕೂಡ ಸದನದೊಳಗೆ ಜಿಗ್ಗಿಯಲು ಯತ್ನಿಸಿದ್ದಾನೆ. ತಕ್ಷಣ ಸಂಸದರೇ ಸ್ಪ್ರೇ ಮಾಡಿದ ಯುವಕನನ್ನು ಹಿಡಿದಿದ್ದು, ಕೂಡಲೇ ಭದ್ರತಾ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಕಲಾಪಕ್ಕೆ ಅಡ್ಡಿಯಾದ ಕಾರಣ ಮುಂದೂಡಲಾಗಿತ್ತು.

ಅಲ್ಲದೇ, ಸಂಸತ್ತಿನ ಹೊರಗೆ ನುಗ್ಗಿ ಪ್ರತಿಭಟನೆಯಲ್ಲಿ ತೊಡಗಿದ್ದ ಹರಿಯಾಣದ ಹಿಸಾರ್ ಮೂಲದ 42 ವರ್ಷದ ನೀಲಂ ಹಾಗೂ ಮಹಾರಾಷ್ಟ್ರದ ಲಾತೂರ್​ ಮೂಲದ 25 ವರ್ಷದ ಅಮೋಲ್​ ಶಿಂಧೆ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ ಲೋಕಸಭೆಗೆ ನುಗ್ಗಿದ ಆರೋಪಿಯನ್ನು ಮನೋರಂಜನ್​ ಹಾಗು ಮತ್ತೊಬ್ಬನನ್ನು ಸಾಗರ್​ ಶರ್ಮಾ ಎಂದು ಗುರುತಿಸಲಾಗಿದೆ. ಬಂಧಿತರಲ್ಲಿ ಒಬ್ಬನಾಗಿರುವಸಾಗರ ಶರ್ಮಾ, ಸಂಸದ ಪ್ರತಾಪ್​ ಸಿಂಹ ಅವರ ಕಚೇರಿಯಿಂದ ಪಾಸ್ ಪಡೆದು ವೀಕ್ಷಕರಾಗಿ ಗ್ಯಾಲರಿಗೆ ಬಂದಿದ್ದರು ಎಂಬುದಾಗಿ ತಿಳಿದುಬಂದಿದೆ.

ಸಂಸತ್ತಿಗೆ ಸಂದರ್ಶಕರ ಪಾಸ್‌ಗಳನ್ನು ಹೇಗೆ ನೀಡಲಾಗುತ್ತದೆ : ಸಂದರ್ಶಕರ ಪ್ರವೇಶವನ್ನು ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 386 ರ ಮೂಲಕ ನಿಯಂತ್ರಿಸಲಾಗುತ್ತದೆ. ಸಾಮಾನ್ಯವಾಗಿ, ಒಂದೇ ದಿನದಲ್ಲಿ ಒಬ್ಬ ಸಂಸದರು ತನಗೆ ವೈಯಕ್ತಿಕವಾಗಿ ತಿಳಿದಿರುವ ಇಬ್ಬರಿಗೆ ಸಂದರ್ಶಕರ ಪಾಸ್‌ಗಳನ್ನು ನೀಡಬಹುದು. ಈ ಪ್ರಕ್ರಿಯೆ ಹೊಸ ಸಂಸತ್ತಿನಲ್ಲಿ ಮಾತ್ರ ಜಾರಿಯಲ್ಲಿದೆ. ಈ ಹಿಂದೆ ಹಳೆಯ ಸಂಸತ್ತಿನ ಕಟ್ಟಡಕ್ಕೆ ಭೇಟಿ ನೀಡಲು ಜನರು ಡಿಜಿಟಲ್ಸಂಸದ್ ವೆಬ್‌ಸೈಟ್ಮೂಲಕ ಅರ್ಜಿ ಸಲ್ಲಿಸಬೇಕಿತ್ತು.

ಸಂದರ್ಶಕರ ಪಾಸ್​ಗಳಿಗೆ ಅರ್ಜಿ ಸಲ್ಲಿಸುವಾಗ, ಸಂಸದರು ಮೇಲಿನ ಹೆಸರಿನ ಸಂದರ್ಶಕರು ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳುವ ಪ್ರಮಾಣಪತ್ರ ನೀಡಬೇಕು. ಜೊತೆಗೆ ಭದ್ರತಾ ಕಾರಣಗಳ ದೃಷ್ಟಿಯಿಂದ ಸಂದರ್ಶಕರು ಫೋಟೋ ಇರುವ ಗುರುತಿನ ಚೀಟಿಯನ್ನು ಹೊಂದಿರಬೇಕು. ಸಂದರ್ಶಕರ ತನ್ನ ಹೆಸರೊಂದಿಗೆ ತಂದೆ ಅಥವಾ ಗಂಡನ ಹೆಸರನ್ನು ಪೂರ್ಣವಾಗಿ ನೀಡಬೇಕು. ಇದಾದ ನಂತರ ಸಂಸದರ ಕೋರಿಕೆ ಮೇರೆಗೆ ಪಾಸ್​ಗಳನ್ನು ನೀಡಲಾಗುತ್ತದೆ. ಪಾಸ್​ ಹೊಂದಿರುವ ಸಂದರ್ಶಕರಿಂದ ಏನಾದರೂ ಗ್ಯಾಲರಿಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೆ ಸಂಸದರೇ ಸಂಪೂರ್ಣ ಜವಾಬ್ದಾರರು ಎಂದು ತಿಳಿಸಲಾಗಿರುತ್ತದೆ.

ಸಂಸತ್ತಿನ ಭದ್ರತೆ ವ್ಯವಸ್ಥೆ :ಸಂಸತ್ತಿನ ಒಟ್ಟಾರೆ ಭದ್ರತೆ ವ್ಯವಸ್ಥೆಗಳನ್ನು ಜಂಟಿ ಕಾರ್ಯದರ್ಶಿ ಅವರಿಗೆ ವಹಿಸಲಾಗಿರುತ್ತದೆ. ಜಂಟಿ ಕಾರ್ಯದರ್ಶಿ ಅವರು, ಸಂಸತ್ತಿನ ಭದ್ರತಾ ಸೇವೆಗಳು, ದೆಹಲಿ ಪೊಲೀಸ್, ಸಂಸತ್ತು ಕರ್ತವ್ಯ ಗುಂಪು ಮತ್ತು ವಿವಿಧ ಮಿತ್ರ ಭದ್ರತಾ ಏಜೆನ್ಸಿಗಳನ್ನು ಒಳಗೊಂಡ ಸಂಪೂರ್ಣ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ.

ಇಡೀ ಸಂಸತ್ತು ಸಿಆರ್​ಪಿಎಫ್​, ಎನ್​ಡಿಆರ್​ಏಫ್​ ಮತ್ತು ದೆಹಲಿ ಪೊಲೀಸರು ಸೇರಿದಂತೆ ಮೂರು ಪದರದ ಭದ್ರತಾ ವ್ಯವಸ್ಥೆ ಅಡಿ ಬರುತ್ತದೆ. ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಇತರ ಭದ್ರತಾ ಕ್ರಮಗಳೊಂದಿಗೆ ಟೈರ್ ಕಿಲ್ಲರ್‌ಗಳು ಮತ್ತು ರೋಡ್ ಬ್ಲಾಕರ್‌ಗಳನ್ನು ಸಹ ಆಯಕಟ್ಟಿನ ಸ್ಥಳಗಳಲ್ಲಿ ಇಟ್ಟಿರುತ್ತಾರೆ. ಭದ್ರತಾ ಏಜೆನ್ಸಿಗಳ ನಡುವೆ ಉತ್ತಮ ಸಮನ್ವಯಕ್ಕಾಗಿ ಜಂಟಿ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರ ಸ್ಥಾಪಿಸಲಾಗಿರುತ್ತದೆ.

ಸಂಸತ್ತಿನಲ್ಲಿರುವ ಇತರ ಭದ್ರತಾ ಶಸ್ತ್ರಗಾರವು ಡೋರ್ - ಫ್ರೇಮ್ ಮೆಟಲ್ ಡಿಟೆಕ್ಟರ್‌ಗಳು, ಆಧುನಿಕ ಗ್ಯಾಜೆಟ್‌ಗಳು ಮತ್ತು ವಾಹನ ಪ್ರವೇಶವನ್ನು ನಿಯಂತ್ರಿಸುವ ರೇಡಿಯೋ ಫ್ರೀಕ್ವೆನ್ಸಿ ಟ್ಯಾಗ್‌ಗಳನ್ನು ಒಳಗೊಂಡಿರುತ್ತದೆ. ಸಂಸತ್ತಿಗೆ ಭೇಟಿ ನೀಡುವವರನ್ನು ನಾಲ್ಕು ಬಾರಿ ಪರೀಕ್ಷಿಸಲಾಗುತ್ತದೆ ಮತ್ತು ಅವರ ಬ್ಯಾಗ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ಭದ್ರತಾ ಲಾಕರ್​ನಲ್ಲಿ ಇಟ್ಟು ಸಂಸತ್ತಿನ ಒಳಗೆ ಪ್ರವೇಶಿಸುವ ಮೂಲಕ ಎರಡನೇ ಮತ್ತು ಮೂರನೇ ಹಂತದ ಭದ್ರತಾ ತಪಾಸಣೆಗೆ ಪ್ರವೇಶಿಸುತ್ತಾರೆ. ಸಂದರ್ಶಕರ ಗ್ಯಾಲರಿಗೆ ಪ್ರವೇಶಿಸುವ ಮುನ್ನ ಮತ್ತೊಂದು ಭದ್ರತಾ ತಪಾಸಣೆ ಮಾಡಲಾಗುತ್ತದೆ.

ಸಂಸತ್ತಿನ ಕೆಲವು ಸದಸ್ಯರು ಭದ್ರತಾ ರಕ್ಷಣೆಯಲ್ಲಿರುವುದರಿಂದ ಸಂಸತ್ ಭವನದ ಸಂಕೀರ್ಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೇ, ಗೊತ್ತುಪಡಿಸಿದ ಭದ್ರತಾ ಸಿಬ್ಬಂದಿಗೆ ಮಾತ್ರ ಈ ಸವಲತ್ತು ನೀಡಲಾಗಿರುತ್ತದೆ. ಪ್ರತಿ ಗೇಟ್‌ನಲ್ಲಿ ನಿಖರವಾದ ತಪಾಸಣೆ ಇರುತ್ತದೆ. ನಿರಂತರವಾಗಿ ಸಂಸತ್ತಿನ ಭದ್ರತಾ ವ್ಯವಸ್ಥೆಯೂ ದೆಹಲಿ ಪೊಲೀಸ್, ಪಾರ್ಲಿಮೆಂಟ್ ಡ್ಯೂಟಿ ಗ್ರೂಪ್, ಇಂಟೆಲಿಜೆನ್ಸ್ ಬ್ಯೂರೋ, ವಿಶೇಷ ರಕ್ಷಣಾ ಗುಂಪು ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿಗಳೊಂದಿಗೆ ಸಂಪರ್ಕದಲ್ಲಿರುತ್ತದೆ.

ಇದನ್ನೂ ಓದಿ :ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪ: ಗ್ಯಾಲರಿಯಿಂದ ಕಲಾಪಕ್ಕೆ ನುಗ್ಗಿದ ಯುವಕ ಸೇರಿ ಇಬ್ಬರು ವಶಕ್ಕೆ

Last Updated : Dec 13, 2023, 10:50 PM IST

ABOUT THE AUTHOR

...view details